ಕೋಲ್ಕತ್ತಾ ಸಂಚಾರಿ ಪೊಲೀಸ್ ಪೇದೆಯೊಬ್ಬರು, ಬುಧವಾರ ಸಂಜೆ 7:30ರ ವೇಳೆಗೆ ಇಲ್ಲಿನ ಪಾರ್ಕ್ ಸರ್ಕಸ್ ಬಳಿ ಕರ್ತವ್ಯದಲ್ಲಿದ್ದರು. ಸಂಚಾರ ದಟ್ಟಣೆ ನಿರ್ವಹಿಸುತ್ತಿದ್ದ ಸ್ನೇಹಶಿಶ್ ಮುಖರ್ಜಿಗೆ ಅಲ್ಲೇ ಹತ್ತಿರದ ರೆಸ್ಟೋರೆಂಟ್ ಒಂದರಲ್ಲಿ ಮಹಿಳೆಯೊಬ್ಬರಿಗೆ ಸಮಸ್ಯೆ ಉಂಟಾಗಿದೆ ಎಂದು ತಿಳಿಯಿತು.
ಕೂಡಲೇ ಜಾಗಕ್ಕೆ ಬಂದ ಸ್ನೇಹಶಿಶ್‌ಗೆ, ಅಲ್ಲಿದ್ದ ಮಹಿಳೆ ಡಾ. ಮಿತಾ ಭಟ್ಟಾಚಾರ್ಯರ ಸ್ಕೂಟರ್ ಪಾರ್ಕ್ ಸರ್ಕಲ್ ಬಳಿ ಕೆಟ್ಟು ನಿಂತಿದ್ದು, ಪಾರ್ಕ್ ಸ್ಟ್ರೀಟ್‌ನಲ್ಲಿದ್ದ ನರ್ಸಿಂಗ್ ಹೋಂನಲ್ಲಿ ತುರ್ತು ಕರೆಯೊಂದನ್ನು ಅಟೆಂಡ್ ಮಾಡಬೇಕಾದಾಗಲೇ ಅವರಿಗೆ ಹೀಗೆ ಎಡವಟ್ಟಾಗಿದೆ ಎಂದು ತಿಳಿಯಿತು. ಗಂಭೀರವಾಗಿ ಅನಾರೋಗ್ಯಕ್ಕೊಳಗಾಗಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಚಿಕಿತ್ಸೆ ಬೇಕಿತ್ತು. ವೈದ್ಯೆಯ ಸ್ಕೂಟರ್ ಕೆಟ್ಟು ನಿಂತ ವೇಳೆ ಆಸ್ಪತ್ರೆಯ ವೈದ್ಯರು ಲಾಲ್‌ಬಜ಼ಾರ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ.
ಲಾಲ್‌ಬಜ಼ಾರ್ ನಿಯಂತ್ರಣ ಕೇಂದ್ರವು ಕೂಡಲೇ ಸ್ನೇಹಶೀಶ್‌ಗೆ ಕರೆ ಮಾಡಿ ವೈದ್ಯೆಗೆ ಸಹಾಯ ಮಾಡಲು ಸೂಚಿಸಿದೆ. ವಿಷಯ ತಿಳಿಯುತ್ತಲೇ ಒಂದೇ ಒಂದು ನಿಮಿಷ ವ್ಯರ್ಥ ಮಾಡದ ಸ್ನೇಹಶೀಶ್ ಮಿತರ ನೆರವಿಗೆ ಧಾವಿಸಿ, ಆಕೆಯನ್ನು ತಮ್ಮ ವಾಹನದಲ್ಲಿ ನರ್ಸಿಂಗ್ ಹೋಂಗೆ ಕರೆದೊಯ್ದಿದ್ದಾರೆ.
ಸರಿಯಾಗ ಸಂದರ್ಭಕ್ಕೆ ಆಸ್ಪತ್ರೆಗೆ ತಲುಪಲು ಸಫಲರಾದ ಮಿತಾ ಭಟ್ಟಾಚಾರ್ಯ ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡಿ ಮುಗಿಸಿ ಅವರಿಗೆ ಮರುಜೀವ ನೀಡಲು ಸಫಲರಾಗಿದ್ದಾರೆ.
ಸ್ನೇಹಶೀಶ್ ಸೇರಿದಂತೆ ಅಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ಒಂದು ರೀತಿಯ ಸಾರ್ಥಕ ಭಾವ ಮೂಡಿಸಿದೆ.