32 ವರ್ಷದ ವ್ಯಕ್ತಿಯೊಬ್ಬ ತನ್ನ ನೆರೆಮನೆಯ ಕುಟುಂಬದ ಏಳು ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೃತದೇಹವನ್ನು ಸೂಟ್ಕೇಸ್ ನಲ್ಲಿ ತುಂಬಿಟ್ಟಿದ್ದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ.
ಭಾನುವಾರದಂದು ಕೊಲ್ಕತ್ತಾದ ಶ್ರೀಧರ ರಾಯ್ ರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು, ಅಪಾರ್ಟ್ಮೆಂಟ್ ಒಂದರ ನಿವಾಸಿಯಾದ ಬಾಲಕಿ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು. ಆಕೆಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು 12 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಅಪಾರ್ಟ್ಮೆಂಟಿನ 32 ಫ್ಲಾಟ್ ಗಳನ್ನು ತಪಾಸಣೆ ನಡೆಸಿದ್ದು, ಬಾಲಕಿ ಪತ್ತೆಯಾಗಿರಲಿಲ್ಲ. ಈ ವೇಳೆ ಪಕ್ಕದಲ್ಲಿದ್ದ ಮನೆಯೊಂದರ ನಿವಾಸಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ಆದರೆ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿ ತೆರಳಿದ್ದರು.
ಸಂಜೆ ವೇಳೆಗೆ ಅನುಮಾನ ವ್ಯಕ್ತವಾಗಿದ್ದ ಮನೆಗೆ ಬೀಗ ಹಾಕಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಅವರು ಬಾಗಿಲು ಒಡೆದು ನೋಡಿದಾಗ ಸೂಟ್ಕೇಸ್ ನಲ್ಲಿ ಬಾಲಕಿ ಮೃತ ದೇಹ ಪತ್ತೆಯಾಗಿದೆ.
ಆರೋಪಿ ಮೂಲತಃ ಬಿಹಾರದ ಸಮಸ್ಟಿಪುರದವನು ಎಂದು ಹೇಳಲಾಗಿದ್ದು, ಬಾಲಕಿಯನ್ನು ಕೊಲೆ ಮಾಡಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಆತನನ್ನು ಬಂಧಿಸಿರುವ ಪೊಲೀಸರು ಇದೀಗ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದರ ಮಧ್ಯೆ ನಾವುಗಳು ಅನುಮಾನ ವ್ಯಕ್ತಪಡಿಸಿದರೂ ಸಹ ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.