ತನ್ನ ಅನುಮತಿ ಇಲ್ಲದೆ ಸ್ಮಾರ್ಟ್‌ಫೋನ್ ಖರೀದಿಸಿದಳು ಎಂದು ಹೆಂಡತಿಯನ್ನ ಕೊಲ್ಲಲು, ಪತಿಯೆ ಸುಪಾರಿ ಕಿಲ್ಲರ್ ನೇಮಕ ಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯೊಬ್ಬನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ ನೋಡುವುದಾದರೆ ಬಂಧಿತನ ಹೆಂಡತಿ ಕೆಲ ತಿಂಗಳ ಹಿಂದೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಕೇಳಿದ್ದರು. ಆದರೆ ಆತ ಫೋನ್ ಕೊಡಿಸಿರಲಿಲ್ಲ. ಇದರಿಂದ ಆಕೆಯೆ ಟ್ಯೂಷನ್ ತರಗತಿಗಳನ್ನ ನೀಡಿ ಅಷ್ಟುಇಷ್ಟು ಹಣ ಕೂಡಿಸಿ ಹೊಸವರ್ಷದ ದಿನದಂದು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಇದರಿಂದ ಕೋಪಗೊಂಡ ಪತಿ, ಪತ್ನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಆಗಲೂ ಕೇಳದಿದ್ದಾಗ ಆಕೆಯನ್ನ ಕೊಲ್ಲಲು ಸುಪಾರಿ ಕಿಲ್ಲರ್ ನೇಮಕ ಮಾಡಿದ್ದಾನೆ.
ಕೊಲೆ ಪ್ಲಾನ್ ರೂಪಿಸಿದ ಸುಪಾರಿ ಕಿಲ್ಲರ್, ಆತನ ಸಹಚರ ಹಾಗೂ ಮಹಿಳೆಯ ಪತಿ ಗುರುವಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಗುರುವಾರ ರಾತ್ರಿ ಮನೆಯ ಮುಖ್ಯದ್ವಾರಕ್ಕೆ ಬೀಗ ಹಾಕಿ ಬರುತ್ತೇನೆ ಎಂದ ಪತಿ ಎಷ್ಟು ಹೊತ್ತಾದರು ಬರದ ಕಾರಣ. ಏನೋ ಅನಾಹುತ ಆಗಿದೆ ಎಂದು ಬೆದರಿದ ಪತ್ನಿ ಆತನನ್ನ ಹುಡುಕುತ್ತಾ ಹೊರ ಬಂದಿದ್ದಾಳೆ. ಆಗ ಸುಪಾರಿಕಿಲ್ಲರ್ ಹಾಗೂ ಆತನ ಸಹಚರ ಆಕೆಯ ಕತ್ತಿಗೆಗೆ ಚೂಪಾದ ಕತ್ತಿಯಿಂದ ದಾಳಿ ಮಾಡಿದ್ದಾರೆ.
ದಾಳಿಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರು ದೈರ್ಯ ವಹಿಸಿದ ಮಹಿಳೆ ಮನೆಯಿಂದ ಓಡಿಹೋಗಿದ್ದಾರೆ. ಹೊರಬಂದ ಆಕೆ ತನ್ನನ್ನು ಕಾಪಾಡುವಂತೆ ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನ ಆಸ್ಪತ್ರೆಗೆ ಸೇರಿಸಿ, ಅವಳ ಪ್ರಾಣ ಉಳಿಸಿದ್ದಾರೆ. ಆರೋಪಿಗಳು ಚೂಪಾದ ವಸ್ತುಗಳಿಂದ ಮಹಿಳೆಯನ್ನ ಘಾಸಿಗೊಳಿಸಿದ್ದರಿಂದ ಆಕೆ ಗಂಟಲಿಗೆ ಏಳು ಹೊಲಿಗೆ ಹಾಕಲಾಗಿದೆ. ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ನರೇಂದ್ರಪುರದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ.
ಕೊಲ್ಕತ್ತಾ ಪೊಲೀಸರು ಸಂತ್ರಸ್ತ ಮಹಿಳೆಯ ಪತಿ, ಆತ ನೇಮಿಸಿದ ಸುಪಾರಿ ಕಿಲ್ಲರ್ ಇಬ್ಬರನ್ನು ಬಂಧಿಸಿದ್ದಾರೆ. ಕಿಲ್ಲರ್ ಜೊತೆಗಿದ್ದ ಸಹಚರನಿಗೆ ಹುಡುಕಾಟ ಮುಂದುವರೆದಿದೆ. ಪತಿಯನ್ನು ರಾಜೇಶ್ ಝಾ ಎಂದು ಗುರುತಿಸಲಾಗಿದ್ದು, ಬಾಡಿಗೆ ದಾಳಿಕೋರನನ್ನು ಸೂರಜಿತ್ ಎಂದು ಗುರುತಿಸಲಾಗಿದೆ.