ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣ ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ತಕ್ಷಣವೇ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯಂತಹ ಕಠಿಣ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಜವಾಬ್ದಾರಿಯಿಂದ ವರ್ತಿಸಲಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಇದೆಲ್ಲದರ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ಕೊಲ್ಕತ್ತಾದಲ್ಲಿ ನಡೆದ ಪ್ರಕರಣವನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದನ್ನೇ ನೆಪವಾಗಿಟ್ಟುಕೊಂಡು ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರ ನಡೆಯುತ್ತಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಮೀರತ್ ನ ಊರ್ಜಾ ಭವನ್ ನಲ್ಲಿ ಮಾತನಾಡಿದ ಅವರು, ಕೊಲ್ಕತ್ತಾದಲ್ಲಿ ನಡೆದ ಪ್ರಕರಣವನ್ನು ಮಾಧ್ಯಮಗಳಲ್ಲಿ ವೈಭವೀಕರಿಸಲಾಗುತ್ತಿದೆ. ಇದೇ ರೀತಿಯ ಪ್ರಕರಣಗಳು ಬಿಜೆಪಿ ಆಡಳಿತದಲ್ಲಿರುವ ಮಣಿಪುರ ಮೊದಲಾದ ರಾಜ್ಯಗಳಲ್ಲೂ ನಡೆದಿದ್ದು, ಆ ಸಂದರ್ಭದಲ್ಲಿ ಯಾರೊಬ್ಬರೂ ಇದನ್ನು ಪ್ರಶ್ನಿಸಿರಲಿಲ್ಲ ಎಂದರು. ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ರೈತ ಹೋರಾಟದ ಬಗ್ಗೆಯೂ ಮಾತನಾಡಿದ ಅವರು, ನಾವು 25 ಲಕ್ಷ ರೈತರ ಮೆರವಣಿಗೆಯನ್ನು ಕೆಂಪುಕೋಟೆಗೆ ತೆಗೆದುಕೊಂಡು ಹೋಗುವ ಬದಲು ಸಂಸತ್ ಭವನಕ್ಕೆ ಹೋಗಿದ್ದರೆ ನಮ್ಮ ಹೋರಾಟದಲ್ಲಿ ಯಶಸ್ವಿಯಾಗುತ್ತಿದ್ದೆವು ಎಂದು ಅಭಿಪ್ರಾಯಪಟ್ಟರು.