ಕೊಲ್ಕತ್ತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ಯುವ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ ಕೂಗು ಬಲವಾಗಿದೆ. ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಪಾಲ್ಗೊಳ್ಳುವ ಆರೋಪಿಗಳ ವಿರುದ್ಧ ತ್ವರಿತ ನ್ಯಾಯಾಲಯಗಳಲ್ಲಿ ಅತಿ ಶೀಘ್ರವಾಗಿ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ಕೆಲವೊಂದು ಮಾಧ್ಯಮಗಳಲ್ಲಿ ಸಂತ್ರಸ್ತೆಯ ನೈಜ ಹೆಸರು ಹಾಗೂ ಫೋಟೋಗಳು ಹರಿದಾಡಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ಇವುಗಳನ್ನು ಕೂಡಲೇ ತೆಗೆದು ಹಾಕುವಂತೆ ಆದೇಶಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಸರ್ಚ್ ಎಂಜಿನ್ ತಾಣಗಳ ದೈತ್ಯ ‘ಗೂಗಲ್’ ನಲ್ಲಿ ಕೆಲವರು ಹುಡುಕಾಡಿರುವ ಸಂಗತಿ ನಿಜಕ್ಕೂ ಆತಂಕ ಹುಟ್ಟಿಸುವಂತಿದೆ.
‘ಗೂಗಲ್’ ಟ್ರೆಂಡ್ಸ್ ಮಾಹಿತಿಗಳ ಪ್ರಕಾರ, ಸರ್ಚ್ ಎಂಜಿನ್ ನಲ್ಲಿ ಕೊಲ್ಕತ್ತಾ ಸಂತ್ರಸ್ತೆಯ ಹೆಸರನ್ನು ಹಾಕಿ ಪೋರ್ನ್ ವಿಡಿಯೋ ಹುಡುಕಲಾಗಿದೆ. ಇದನ್ನು ನೋಡಿದ ಬಹುತೇಕ ಮಂದಿ ಇವರಿನ್ನೆಂತಹ ವಿಕೃತರಿರಬೇಕು ಎಂದು ಹೇಳುತ್ತಿದ್ದಾರೆ. 2019 ರಲ್ಲಿ ನಡೆದಿದ್ದ ಮತ್ತೊಂದು ಪ್ರಕರಣದ ಸಂದರ್ಭದಲ್ಲೂ ಗೂಗಲ್ ನಲ್ಲಿ ಇದೇ ರೀತಿ ಹುಡುಕಾಟ ನಡೆಸಲಾಗಿತ್ತು. ಗೂಗಲ್ ನಲ್ಲಿ ಇಂತಹ ವಿಡಿಯೋಗಳ ಹುಡುಕಾಟ ಟ್ರೆಂಡಿಂಗ್ ನಲ್ಲಿ ಇತ್ತೆಂದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಚಿಂತನೆ ಎಲ್ಲರಲ್ಲೂ ಮೂಡಬೇಕಿದೆ.