ಕೋಲ್ಕತ್ತಾದ ಲೊರೆಟೊ ಕಾಲೇಜು ಹಿಂದಿ ಮತ್ತು ಬಂಗಾಳಿ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ತೆಗೆದುಕೊಳ್ಳದಂತೆ ನಿರ್ಬಂಧನೆ ಹಾಕಿದ ಬಳಿಕ ಭಾರೀ ವಿರೋಧವನ್ನು ಎದುರಿಸುತ್ತಿದೆ. ಈ ಕಾಲೇಜು ಇತ್ತೀಚೆಗೆ ಹಲವಾರು ಪದವಿ ಪೂರ್ವ ಕೋರ್ಸ್ಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇಲ್ಲಿ ಸಂಸ್ಥೆಯ ಸೂಚನೆಗಳು , ಗ್ರಂಥಾಲಯದ ಪುಸ್ತಕಗಳು ಹೀಗೆ ಪ್ರತಿಯೊಂದೂ ಇಂಗ್ಲೀಷ್ನಲ್ಲಿದೆ. ಬಂಗಾಳಿ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳನ್ನು ಏಕೆ ಕಾಲೇಜಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಉಲ್ಲೇಖಿಸಿದೆ.
ಲೊರೆಟೋ ಕಾಲೇಜಿನ ಯಾವುದೇ ಸುತ್ತೋಲೆಗಳು ಇಂಗ್ಲೀಷ್ನಲ್ಲಿಯೇ ಇರುತ್ತೆ. ಅಲ್ಲದೇ ಇಲ್ಲಿ ಪರೀಕ್ಷೆ ಕೂಡ ಇಂಗ್ಲೀಷ್ನಲ್ಲಿಯೇ ಬರೆಯಬೇಕು. ನಮ್ಮ ಗ್ರಂಥಾಲಯದಲ್ಲಿಯೂ ಸಹ ಕೇವಲ ಇಂಗ್ಲೀಷ್ ಭಾಷೆಯ ಪುಸ್ತಕಗಳೇ ಸಿಗುತ್ತದೆ ಎಂದು ಕಾಲೇಜು ಹೇಳಿದೆ.
ಕಾಲೇಜು ಆಡಳಿತ ಮಂಡಳಿಯ ಈ ಹೇಳಿಕೆಯು ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಕೋಲ್ಕತ್ತಾ ವಿಶ್ವ ವಿದ್ಯಾಲಯವು ಈ ವಿಚಾರವಾಗಿ ಮಧ್ಯ ಪ್ರವೇಶಿಸಬೇಕಾಯ್ತು. ಅಲ್ಲದೇ ಪ್ರಾಂಶುಪಾಲರ ಬಳಿಯಲ್ಲಿ ಈ ಸಂಬಂಧ ವಿವರಣೆಯನ್ನೂ ಕೇಳಿದೆ. ಲೊರೆಟೊದ ಪ್ರಾಂಶುಪಾಲರಾದ ಸಿಸ್ಟರ್ ಕ್ರಿಸ್ಟಿನ್ ಕೌಟಿನ್ಹೋ ಅವರು ನಿಯಮವು ವಿಶ್ವವಿದ್ಯಾನಿಲಯದ ಮಾರ್ಗಸೂಚಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಟೀಕೆಗಳ ನಂತರ, ಕಾಲೇಜು ಕ್ಷಮೆಯಾಚಿಸಿತು.
“ವಿದ್ಯಾರ್ಥಿಗಳ ಭಾವನೆಗಳಿಗೆ ಅಜಾಗರೂಕತೆಯಿಂದ ನೋವುಂಟು ಮಾಡಿದ್ದಕ್ಕಾಗಿ ಕಾಲೇಜು ಕ್ಷಮೆಯಾಚಿಸುತ್ತದೆ. ಯಾವುದೇ ಹಿನ್ನೆಲೆಯ ಯಾವುದೇ ವಿದ್ಯಾರ್ಥಿಗೆ ತಾರತಮ್ಯ ಮಾಡುವ ಉದ್ದೇಶ ಇರಲಿಲ್ಲ. ಆದರೆ, ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಕಾರಣವಿತ್ತು. ಬೋಧನಾ ಮಾಧ್ಯಮ ಇಂಗ್ಲಿಷ್ ಅಲ್ಲದ ಶಾಲೆಗಳಿಂದ ಬರುವ ವಿದ್ಯಾರ್ಥಿಗಳು ಉಪನ್ಯಾಸಗಳನ್ನು ಅನುಸರಿಸಲು ತೊಂದರೆ ಎದುರಿಸುತ್ತಿರುವುದನ್ನು ಶಿಕ್ಷಕರು ಗಮನಿಸಿದರು. ಆದ್ದರಿಂದ, ವಿದ್ಯಾರ್ಥಿಗಳು ವಾತಾವರಣದಲ್ಲಿ ಅನಾನುಕೂಲತೆಯನ್ನು ಅನುಭವಿಸದಿರಲು ಇದು ಪ್ರಾಯೋಗಿಕ ಪರಿಗಣನೆಯಾಗಿದೆ, ”ಎಂದು ಕ್ಷಮೆಯಾಚನೆಯಲ್ಲಿ ಹೇಳಲಾಗಿದೆ.