ಕೋಲಾರ: ಪತ್ನಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನಾಗಿ ಮಾಡಲು ಪತಿ 10 ಸದಸ್ಯರನ್ನು ಹೈಜಾಕ್ ಮಾಡಿ ಪ್ರವಾಸಕ್ಕೆ ತೆರಳಿದ್ದ. ಆದರೆ ಪ್ರವಾಸದಿಂದ ವಾಪಸ್ ಆಗುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಅಂಗೊಂಡನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಅಮರಾವತಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲು ಪತಿ ಕೇಶವರೆಡ್ಡಿ 10 ಸದಸ್ಯರನ್ನು ಹೈಜಾಕ್ ಮಾಡಿದ್ದರು. ಸದಸ್ಯರು ಪ್ರವಾಸ ಮುಗಿಸಿ ಬರುವಾಗ ಅಪಘಾತ ಸಂಭವಿಸಿದ್ದು, ಕೇಶವರೆಡ್ಡಿ ಮೃತಪಟ್ಟಿದ್ದಾರೆ. ಕೆಲ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಲಾರದಿಂದ ಹೊರಟ 10 ಜನ ಸದಸ್ಯರು ಬಾಂಬೆ, ಶಿರಡಿ ಪ್ರವಾಸ ಮುಗಿಸಿ, ನೆಲಮಂಗಲದ ಬಳಿ ಫಾರಂ ಹೌಸ್ ನಲ್ಲಿ ತಂಗಿದ್ದರು. 5 ಜನ ಸದಸ್ಯರೊಂದಿಗೆ ಕೇಶವರೆಡ್ಡಿ ಫಾರಂ ಹೌಸ್ ನಿಂದ ಹೊರ ಬಂದಿದ್ದರು. ಈ ವೇಳೆ ನೆಲಮಂಗಲದ ಬೇಗೂರು ಬಳಿ ಅಪಘಾತ ಸಂಭವಿಸಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಶವರೆಡ್ಡಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಅಪಘಾತ ಕಾರಣಕ್ಕೆ ಮುಂದೂಡಲಾಗಿದೆ.