
ಕೋಲಾರ: ಕೋಲಾರದಿಂದ ರಾಜಸ್ಥಾನದ ಜೈಪುರ್ ಗೆ ಟೊಮೆಟೊ ತುಂಬಿಕೊಂಡು ಸಾಗಿದ್ದ ಲಾರಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 21 ಲಕ್ಷ ಮೌಲ್ಯದ ಟೊಮೆಟೊ ಇದ್ದ ಲಾರಿ ಕೋಲಾರ ಮಾರುಕಟ್ಟೆಯಿಂದ ಜೈಪುರಕ್ಕೆ ಸಾಗಿತ್ತು. ಆದರೆ ಮಾರ್ಗ ಮಧ್ಯೆ ಟೊಮೆಟೊ ಲಾರಿ ನಾಪತ್ತೆಯಾಗಿತ್ತು.
ಇದೀಗ ಕೋಲಾರದಿಂದ ಜೈಪುರಕ್ಕೆ ತೆರಳಿದ್ದ ಟೊಮೆಟೊ ಲಾರಿ ಗುಜರಾತ್ ನಲ್ಲಿ ಪತ್ತೆಯಾಗಿದೆ. ಲಾರಿ ಚಾಲಕ ಟೊಮೆಟೊವನ್ನು ಗುಜರಾತ್ ನ ಅಹಮದಾಬಾದ್ ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿರುವುದು ಗೊತ್ತಾಗಿದ್ದಾರೆ.
ಲಾರಿ ಚಾಲಕ ಅನ್ವರ್ ಲಾರಿಯಲ್ಲಿ ಅಳವಡಿಸಿದ್ದ ಜಿಪಿಎಸ್ ಕಿತ್ತೆಸೆದು ಲಾರಿಯನ್ನು ಅಹಮದಾಬಾದ್ ಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲಿ ಟೊಮೆಟೊವನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಹಣ ಪಡೆದು ಪರಾರಿಯಾಗಿದ್ದಾನೆ.
ತಲೆಮರೆಸಿಕೊಂಡಿರುವ ಲಾರಿ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲಾರಿ ಮಾಲೀಕ ಸಾಧಿಕ್ ಅಹಮದಾಬಾದ್ ಗೆ ತೆರಳಿದ್ದು, ಅಲ್ಲಿನ ಪೊಲೀಸರಿಗೂ ದೂರು ನೀಡಲು ಮುಂದಾಗಿದ್ದಾರೆ.
ಜುಲೈ 27ರಂದು ಕೊಲಾರದ ಮಾರುಕಟ್ಟೆಯಿಂದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ಜೈಪುರಕ್ಕೆ ಸಾಗಿತ್ತು. ಮೆಹತ್ ಟ್ರಾನ್ಸ್ ಪೋರ್ಟ್ ನ ಲಾರಿಯಲ್ಲಿ ಟೊಮೆಟೊ ಕೊಂಡೊಯ್ಯಲಾಗಿತ್ತು. ಆದರೆ ಲಾರಿ ಚಾಲಕ ಅನ್ವರ್ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಲಾರಿ ಮಾಲೀಕ ಟೊಮೆಟೊ ಲಾರಿ ನಾಪತ್ತೆಯಾಗಿದೆ ಎಂದು ಕೋಲಾರ ಠಾಣೆಯಲ್ಲಿ ದೂರು ನೀಡಿದ್ದರು.