ಕೋಲಾರ: ವಿವಾಹಿತ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ಆರೈಕೆಗೆ ಬಂದಿದ್ದ ಯುವತಿ ಜೊತೆ ಪ್ರೇಮಾಂಕುರವಾಗಿದ್ದು, ಮದುವೆ ಮಾಡಿಕೊಡಿ ಎಂದು ಕೇಳುತ್ತಿದ್ದಂತೆ ಯುವತಿಯ ಮನೆಯವರು ಹಾಗೂ ಸ್ಥಳೀಯರು ಅಟ್ಟಾಡಿಸಿ ಕೊಲೆಗೈದ ಘಟನೆ ಕೋಲಾರದಲ್ಲಿ ನಡೆದಿದೆ.
ಉಸ್ಕಾನ್ ಕೊಲೆಯಾದ ವ್ಯಕ್ತಿ. ಉಸ್ಕಾನ್ 5 ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೀಗ್ಯದಿಂದ ಬಳಲುತ್ತಿದ್ದಳು, ಈ ವೇಳೆ ಆರೋಗ್ಯ ವಿಚರಿಸಲು ಬಂದಿದ್ದ ಜಬಿನಾ ಸಂಬಂಧಿ ಯುವತಿಯೊಂದಿಗೆ ಉಸ್ಕಾನ್ ಗೆ ಪ್ರೀತಿ ಚಿಗುರಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಜಬಿನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಪತಿಯಿಂದ ದೂರಾಗಿ ಪತ್ನಿ ತವರು ಸೇರಿದ್ದಳು. ಈ ವೇಳೆ ಉಸ್ಕಾನ್ ತಾನು ಪ್ರೀತಿಸಿದ ಯುವತಿ ಮನೆಗೆ ಬಂದು ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪದ ಯುವತಿ ಮನೆಯವರು ಹಾಗೂ ಸ್ಥಳೀಯರು ಗಲಾಟೆ ಮಾಡಿದ್ದಾರೆ. ಅಲ್ಲದೇ ಉಸ್ಕಾನ್ ನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಸ್ಕಾನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.