ಬೆಂಗಳೂರು: ಕೋಲಾರ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಭಿನ್ನಮತ ಸ್ಫೋಟಗೊಂಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಪರಿಷತ್ ಸದಸ್ಯ ಅನೀಲ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ನೀಡದಂತೆ ಒತ್ತಾಯಿಸಿ ಕೋಲಾರಾ ಜಿಲ್ಲಾ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ತೀರ್ಮಾನಿಸಿದ್ದು, ವಿಧಾನಸೌಧದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಕಚೇರಿಯಲ್ಲಿ ಹೈಡ್ರಾಮ ನಡೆದಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಅನೀಲ್ ರಾಜೀನಾಮೆ ಪತ್ರ ಹಿಡಿದು ಸಭಾಪತಿ ಬಸವರಾಜ್ ಹೊರಟ್ಟಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಸಚಿವ ಬೈರತಿ ಸುರೇಶ್ ಇಬ್ಬರು ನಾಯಕರ ಮನವೊಲಿಕೆ ಮಾಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಾವು ಬರುವವರೆಗೂ ಕಾಯಿರಿ. ರಾಜೀನಾಮೆ ನೀಡಬೇಡಿ ಎಂದು ಮನವೊಲಿಕೆ ಮಾಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಶಾಸಕ ನಜೀರ್ ಅಹ್ಮದ್, ಅನೀಲ್ ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದಿದ್ದು, ಸಭಾಪತಿ ಕಚೇರಿಯಿಂದ ನಿರ್ಗಮಿಸಿದ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿದ ನಜೀರ್ ಅಹ್ಮದ್, ಯಾವುದೇ ಕಾರಣಕ್ಕೂ ಸಚಿವ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಡಬಾರದು. ತಾನು ಯಾವಾಗಬೇಕಾದರೂ ರಾಜೀನಾಮೆ ನೀಡಬಹುದು. ಆದರೆ ಸ್ವತ: ಸಿಎಂ ಹಾಗೂ ಡಿಸಿಎಂ ಕರೆ ಮಾಡಿ ತಾವು ಬೆಂಗಳೂರಿಗೆ ಬರುವವರೆಗೂ ಕಾಯಿರಿ. ಸಂಜೆ ಎಲ್ಲರೊಂದಿಗೂ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ರಾಜೀನಾಮೆ ನೀಡದೇ ಸಿಎಂ ಹಾಗೂ ಡಿಸಿಎಂ ಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.