ಕೋಲಾರ: ರಕ್ಷಣೆ ನೀಡಬೇಕಾದ ಆರಕ್ಷಕರೇ ಭಕ್ಷಕರಾಗಿ ಬೆದರಿಕೆ ಹಾಕಿದ ಕಥೆಯಿದು. ಪ್ರಕರಣ ಕ್ಲೋಸ್ ಮಾಡಲು ತನ್ನ ಜೊತೆ ಸಹಕರಿಸುವಂತೆ ಮಹಿಳೆಯೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಮಹಿಳೆಯೊಬ್ಬರು ಕೋಲಾರದ ಇನ್ಸ್ ಪೆಕ್ಟರ್ ಓರ್ವರ ವಿರುದ್ಧ ಇಂತದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋದ ಮಹಿಳೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಠಾಣೆಯ ಸಿಪಿಐ ನಂಜಪ್ಪ ಎಂಬಾತ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.
ಮಹಿಳೆಯೊಬ್ಬರು ಪಕ್ಕದ ಮನೆಯವರು ತನಗೆ ಹಾಗೂ ತನ್ನ ಪತಿ ಮೇಲೆ ದೌರ್ಜನ್ಯವೆಸಗಿದ್ದು, ಹಲ್ಲೆ ನಡೆಸಿದ್ದಾರೆ ನ್ಯಾಯಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರು ಪಡೆದು ನ್ಯಾಯಕೊಡಿಸುವ ಬದಲು ತನ್ನ ಮೇಲೆಯೇ ಶೋಷಣೆ ಮಾಡಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು. ಠಾಣೆಗೆ ಕರೆಸಿ ತನ್ನನ್ನು ಮಲಗು ಬಾ ಎಂದು ಸಿಪಿಐ ಕರೆಯುತ್ತಿದ್ದು, ತನಗೆ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಪೊಲೀಸರಲ್ಲದೇ ಪುರುಷ ಪೊಲೀಸರೇ ತನ್ನನ್ನು ಬಂಧಿಸಿ ಅವಮಾನ ಮಾಡಿದ್ದಾರೆ. ಅಲ್ಲದೇ ಆಗಾಗ ಮನೆ ಬಳಿ ಪೊಲೀಸರನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ.
ಅನಗತ್ಯವಾಗಿ ಠಾಣೆಗೆ ಕರೆಸಿ ಅವಾಚ್ಯವಾಗಿ ನಿಂದಿಸುತ್ತಾರೆ. ನನ್ನ ವಿರುದ್ಧ ವೇಶ್ಯಾವಾಟಿಕೆ ಕೇಸ್, ನನ್ನ ಪತಿಯ ವಿರುದ್ಧ ರೌಡಿಶೀಟರ್ ತೆರೆಯುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸರು ಧಮ್ಕಿ ಹಾಕಿ ಬೆದರಿಸುತ್ತಿದ್ದಾರೆ. ನಮಗೆ ರಕ್ಷಣೆ ನೀಡಿ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.