ಕೋಲಾರ: ಅಪರಾಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಅರ್ಧ ಕೆಜಿ ಚಿನ್ನ ಕಳವು ಮಾಡಿದ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆಯ ಪಿಸಿ ಅನಿಲ್ ಚಿನ್ನಾಭರಣ ಕಳವು ಮಾಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಕಳವು ಪ್ರಕರಣದಲ್ಲಿ 1 ಕೆಜಿ 480 ಗ್ರಾಂ ಚಿನ್ನವನ್ನು ಪೊಲೀಸರು ರಿಕವರಿ ಮಾಡಿದ್ದರು. ವ್ಯಾಪಾರಿಯಿಂದ ಕಳುವಾಗಿದ್ದ 2 ಕೆಜಿ ಚಿನ್ನದಲ್ಲಿ 1408 ಗ್ರಾಂ ಚಿನ್ನ ಪತ್ತೆ ಮಾಡಿದ್ದು, 2 ಕೆಜಿ ಚಿನ್ನದಲ್ಲಿ 582 ಗ್ರಾಂ ಚಿನ್ನ ನಾಪತ್ತೆಯಾಗಿದೆ.
ಫೆಬ್ರವರಿ 25ರಂದು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಚಿನ್ನದ ವ್ಯಾಪಾರಿ ಗೌತಮ ಚಂದ್ ಗೆ ಸೇರಿದ ಚಿನ್ನಾಭರಣ ಕಳುವಾಗಿದ್ದು 1 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಬದಲಿಗೆ 1 ಕೋಟಿ 06 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಳೆದ 15 ದಿನಗಳಿಂದ ಅಪರಾಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಅನಿಲ್ ನಾಪತ್ತೆಯಾಗಿದ್ದಾರೆ. ಲೋಕಸಭೆ ಚುನಾವಣೆ ಎರಡನೇ ಹಂತದ ನಂತರ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸುವಂತೆ ಕೆಜಿಎಫ್ ಡಿವೈಎಸ್ಪಿಗೆ ಎಸ್.ಪಿ. ಶಾಂತರಾಜು ಸೂಚನೆ ನೀಡಿದ್ದಾರೆ.