ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವೆಬ್ಸೈಟ್ ಹ್ಯಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಸೈಬರ್ ಠಾಣೆ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ವಿಶ್ವವಿದ್ಯಾಲಯದ ಯುಯುಸಿಎಂಎಸ್ ವೆಬ್ಸೈಟ್ ನಲ್ಲಿರುವ ಕೆಲವು ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಂಡು ಪಾಸ್ವರ್ಡ್ ಗಳನ್ನು ರೀಸೆಟ್ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಫೇಲಾದ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ಯುಪಿಐ ಹಾಗೂ ನಗದು ಮೂಲಕ ಹಣ ಪಡೆದು ಪಾಸು ಮಾಡಿಸುತ್ತಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಕೋಲಾರ ಎಂಎನ್ಐ ಪದವಿ ಪೂರ್ವ ಕಾಲೇಜು ಹಾಗೂ ಸ್ಮಾರ್ಟ್ ಡಿಗ್ರಿ ಕಾಲೇಜಿನ ಟ್ರಸ್ಟಿಗಳಾದ ಸಿ. ಗಿರೀಶ್, ಸಿ ಸಂದೇಶ್ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಟಿ.ಆರ್. ಸೂರ್ಯ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯದ ಎಲ್ಲಾ ಪ್ರಕ್ರಿಯೆಗಳು ಯುಯುಸಿಎಂಎಸ್ ವೆಬ್ ಸೈಟ್ ಮೂಲವೇ ಚಾಲ್ತಿಯಲ್ಲಿದ್ದು, ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲೂ ಇಂತಹ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ.