
ಬ್ರಿಟನ್ ರಾಣಿ ಎಲಿಜಬೆತ್ 2 ನಿಧನದ ಬಳಿಕ ಅವರ ಪುತ್ರ ಚಾರ್ಲ್ಸ್ ರಾಜನ ಪಟ್ಟಕ್ಕೆ ಏರಿದ್ದಾರೆ. ಈ ಸಂದರ್ಭದಲ್ಲಿ ಎಲಿಜಬೆತ್ ಅವರಿಗೆ ಸೇರಿದ 105 ಕ್ಯಾರೆಟ್ ಡೈಮಂಡ್ ‘ಕೊಹಿನೂರ್’ ಸಂಪ್ರದಾಯದಂತೆ ಚಾರ್ಲ್ಸ್ ಅವರ ಪತ್ನಿ ಡಚೆಸ್ ಆಫ್ ಕಾರ್ನಿವಾಲ್ ಕೆಮಿಲಾ ಅವರಿಗೆ ಸೇರುತ್ತದೆ. ಇದರ ಮಧ್ಯೆ ಒಡಿಸ್ಸಾದ ಪುರಿಯ ಸಾಮಾಜಿಕ ಸಂಘಟನೆಯೊಂದು ಇದು ಪುರಿ ಜಗನ್ನಾಥನಿಗೆ ಸೇರಿದ್ದು ಎಂದು ಪ್ರತಿಪಾದಿಸಿದೆ.
ಪುರಿಯ ಸಾಮಾಜಿಕ ಸಾಂಸ್ಕೃತಿಕ ಸಂಘಟನೆ ಶ್ರೀ ಜಗನ್ನಾಥ ಸೇನೆ ಈ ಕುರಿತಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಕೊಹಿನೂರ್ ಡೈಮಂಡ್ ಭಾರತಕ್ಕೆ ಮರಳಿ ತರಲು ಪ್ರಯತ್ನ ನಡೆಸಬೇಕೆಂದು ಮನವಿ ಮಾಡಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವಂತೆ ಕೋರಲಾಗಿದೆ.
ಕೊಹಿನೂರ್ ಡೈಮಂಡ್ ಅನ್ನು ಪಂಜಾಬ್ ಮಹಾರಾಜ ರಂಜಿತ್ ಸಿಂಗ್, ಪುರಿ ಜಗನ್ನಾಥನಿಗೆ ಅರ್ಪಿಸಿದ್ದು, ಆದರೆ ಇದು ಸಕಾಲಕ್ಕೆ ಹಸ್ತಾಂತರವಾಗಲಿಲ್ಲ. 1839 ರಲ್ಲಿ ಮಹಾರಾಜ ರಂಜಿತ್ ಸಿಂಗ್ ನಿಧನರಾದ ಬಳಿಕ ಅವರ ಪುತ್ರ ದುಲೀಪ್ ಸಿಂಗ್ ಅವರಿಂದ ಬ್ರಿಟಿಷರು ಈ ವಜ್ರವನ್ನು ಪಡೆದುಕೊಂಡಿದ್ದರು ಎಂದು ವಿವರಿಸಲಾಗಿದೆ.
ಶ್ರೀ ಜಗನ್ನಾಥ ಸೇನೆಯ ಪ್ರಮುಖ ಪ್ರಿಯದರ್ಶನ್ ಪಟ್ನಾಯಕ್ ಎಂಬವರು ಈ ಹಿಂದೆಯೇ ಬ್ರಿಟನ್ ರಾಣಿಗೆ ಪತ್ರ ಬರೆದಿದ್ದು, ಇದನ್ನು ಮರಳಿಸುವಂತೆ ಕೇಳಿದ್ದರಂತೆ. ಇದಕ್ಕೆ ಅಕ್ಟೋಬರ್ 19, 2016 ರಂದು ಉತ್ತರಿಸಿದ್ದ ಬಕಿಂಗ್ಯಾಮ್ ಪ್ಯಾಲೇಸ್ ವಕ್ತಾರರು ಯುನೈಟೆಡ್ ಕಿಂಗ್ಡಂ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿದ್ದರಂತೆ. ಇದನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಲಗತ್ತಿಸಲಾಗಿದೆ.