ಬೆಳಗಾವಿ: ಶ್ರಾವಣ ಮಾಸದ ಮಧ್ಯಂತರದ ವೇಳೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಮಳೆಯಾಗಲಿದೆ. ಯುದ್ಧ ಭೀತಿಯೂ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಕಂಪ, ಸುನಾಮಿಗಳಿಂದಲೂ ಸಾವು ನೋವು ಸಂಭವಿಸಲಿದೆ ಎಂದು ಹೇಳಿದ್ದಾರೆ.
ವಿಷಾನೀಲ ಬೀಸಲಿದ್ದು, ಎಲ್ಲಾ ಕಡೆ ವ್ಯಾಪಿಸುತ್ತದೆ. ಭಾರಿ ಮಳೆಯಿಂದ ಎರಡು ದೇಶಗಳು ನಾಶವಾಗುತ್ತವೆ. ಭಾರತದಲ್ಲಿ ಜಲಪ್ರಳಯವಾಗುವ ಲಕ್ಷಣವಿದ್ದು, ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ದೇಶದ ಮೇಲೆಯೂ ಆಗಲಿದ್ದು, ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪ್ರಕೃತಿ ಕೂಡ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಕೃತಿಯ ದೋಷ ಮನಕುಲಕ್ಕೆ ತಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ತೊಂದರೆ ಇಲ್ಲ. ಪಕ್ಷಾಂತರ ಬಗ್ಗೆ ಚುನಾವಣೆ ಪೂರ್ವವೇ ಹೇಳಿದ್ದೇನೆ. ರಾಜಕೀಯ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ. ಚಂದ್ರಯಾನ -3 ಯಶಸ್ವಿಯಾಗಿ ಒಳ್ಳೆಯದಾಗಲಿದೆ. ಮನುಷ್ಯರಿಗೆ ದೈವದ ಬಲ ಮುಖ್ಯವಾಗಿ ಬೇಕು. ದೈವ ನಂಬಿದವರಿಗೆ ತೊಂದರೆ ಇಲ್ಲ. ಇಲ್ಲವಾದರೆ ಆಪತ್ತು, ಸಾವು ಸಂಭವಿಸುತ್ತದೆ ಎಂದು ಹೇಳಿದ್ದಾರೆ.