ಕೊಡಗು: ಕೊಡಗು ಹಾಗೂ ಕೇರಳ ಗಡಿ ಭಾಗದಲ್ಲಿ ಕೇರಳ ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ.
ಈತನ ಚಿಕಿತ್ಸೆಗಾಗಿ ಅಥವಾ ರಕ್ಷಣೆಗಾಗಿ ನಕ್ಸಲರು ಕೊಡಗು ಜಿಲ್ಲೆಯನ್ನು ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಸ್ಥಳದಲ್ಲಿ ಮೂರು ರೈಫಲ್ ಗಳು, ಒಂದು ಲ್ಯಾಪ್ ಟಾಪ್, ನಾಲ್ಕು ಮೊಬೈಲ್ ಫೋನ್ ಗಳು ಹಾಗೂ 8 ಟೆಂಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಥಳದಲ್ಲಿ 9 ನಕ್ಸಲರು ಇದ್ದಿರಬಹುದು ಎಂದು ಶಂಕಿಸಲಾಗಿದೆ.
ನಕ್ಸಲರು ಕಬಿನಿ ಗುಂಪಿನ ಸದಸ್ಯರಾಗಿದ್ದು, ಮೋಯಿದ್ದೀನ್ ಎಂಬಾತನ ನೇತೃತ್ವದಲ್ಲಿ ಕೊಡಗು-ಕೇರಳ ಗಡಿ ಭಾಗದಲ್ಲಿ ಶಿಬಿರ ಹಾಕಿ ತಂಗಿದ್ದರು. ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.