ಮಡಿಕೇರಿ: ಭೂಕಂಪ ಪೀಡಿತ ಚೆಂಬು ಗ್ರಾಮದ ಬಳಿ ಗುಡ್ಡ ಕುಸಿತವಾಗಿದೆ. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬಡ್ಕ ಗ್ರಾಮದಲ್ಲಿ ಘಟನೆ ನಡೆದಿದೆ. ಭಾರಿ ಶಬ್ದದೊಂದಿಗೆ ನಾಲ್ಕುಕಾಲು ಗುಡ್ಡ ಕೊಚ್ಚಿಕೊಂಡು ಬಂದಿದೆ. ನಿನ್ನೆಯೇ ದಬ್ಬಡ್ಕ ಗ್ರಾಮಸ್ಥರು ಊರು ತೆರವು ಮಾಡಿದ್ದರು. ಗ್ರಾಮಸ್ಥರು ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಇಂದು ಭಾರಿ ಶಬ್ದದೊಂದಿಗೆ ಗುಡ್ಡ ಕೊಚ್ಚಿಕೊಂಡು ಬಂದಿದೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಆಗಸ್ಟ್ 1 ರಿಂದ ವ್ಯಾಪಕ ಮಳೆಯಾಗುತ್ತಿದೆ. ಚೆಂಬು, ಕರಿಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಜಿಲ್ಲೆಯ ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ. ದೇವರಕೊಲ್ಲಿ ಬಳಿ ಮಡಿಕೇರಿ-ಸಂಪಾಜೆ ಮಾರ್ಗದ ರಸ್ತೆ ಬಿರುಕು ಬಿಟ್ಟಿದೆ. ಕೊಯನಾಡು ಬಳಿ ಸೇತುವೆಗೆ ಹಾನಿಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಚೆಂಬು ಗ್ರಾಮ ಬಳಿಯ ಮರ್ಪಡ್ಕ ಸೇತುವೆ ಕೊಚ್ಚಿ ಹೋಗಿದೆ. ಭಾಗಮಂಡಲ-ಕರಿಕೆ ರಸ್ತೆ ಮಾರ್ಗದಲ್ಲಿ ಧರೆ ಕುಸಿತ ಉಂಟಾಗಿದ್ದು, ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.