ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ.
ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ನೆದರ್ಲ್ಯಾಂಡ್ ಒಂದಾಗಿದೆ. ಪ್ರತಿಯೊಬ್ಬರು, ಜೀವನದಲ್ಲಿ ಒಮ್ಮೆ ಇಲ್ಲಿಗೆ ಹೋಗುವ ಕನಸು ಕಾಣ್ತಾರೆ. ಇತ್ತೀಚಿನ ದಿನಗಳಲ್ಲಿ ಈ ದೇಶವು ತನ್ನ ಸೌಂದರ್ಯ ಮತ್ತು ಇತರ ಕಾರಣಗಳಿಂದ ಚರ್ಚೆಯಲ್ಲಿದೆ. ಈಗ ಅಲ್ಲಿನ ಜೈಲು ಚರ್ಚೆಯ ವಿಷ್ಯವಾಗಿದೆ. ನೆದರ್‌ಲ್ಯಾಂಡ್ ನಲ್ಲಿ ಅಪರಾಧದ ಪ್ರಮಾಣವು ಎಷ್ಟು ವೇಗವಾಗಿ ಕುಸಿದಿದೆ ಎಂದರೆ ಅಲ್ಲಿನ ಜೈಲುಗಳು ಖಾಲಿಯಾಗ್ತಿವೆ.
ನೆದರ್ಲೆಂಡ್ ನಲ್ಲಿ ಜೈಲುಗಳನ್ನು ಮುಚ್ಚುವ ಪ್ರಕ್ರಿಯೆ 2013 ರಿಂದ ನಡೆಯುತ್ತಿದೆ. 2019 ರಲ್ಲಿ ಕೆಲವು ಜೈಲುಗಳನ್ನು ಮುಚ್ಚಲಾಗಿದೆ. ಕೆಲವು ಜೈಲುಗಳನ್ನು ನಿರಾಶ್ರಿತರಿಗೆ ಶಾಶ್ವತ ವಸತಿಗೃಹಗಳಾಗಿ ಪರಿವರ್ತಿಸಲಾಗಿದೆ. ಕೈದಿಗಳ ಬಗೆಗಿನ ಮನೋಭಾವವನ್ನು ಆಧರಿಸಿದ ಡಚ್ ವ್ಯವಸ್ಥೆಯು ಯುರೋಪಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ತಜ್ಞರ ಪ್ರಕಾರ, ಇದು ಇತರ ದೇಶಗಳಿಗೆ ಮಾದರಿಯಾಗಲಿದೆ. ಇಲ್ಲಿ ಕ್ರೈಂ ರೇಟ್ ಮಾತ್ರವಲ್ಲದೆ ಅಪರಾಧಿಗಳನ್ನು ನಡೆಸಿಕೊಳ್ಳುವ ರೀತಿಯೂ ಪರಿಸ್ಥಿತಿಯನ್ನು ಬದಲಾಯಿಸಲು ನೆರವಾಗಿದೆ.
ಡಚ್ ನ್ಯಾಯ ವ್ಯವಸ್ಥೆಯಲ್ಲಿ, ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ಖೈದಿಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಶಿಕ್ಷೆಗಿಂತ ಹೆಚ್ಚಾಗಿ ತಿಳುವಳಿಕೆ ನೀಡಲಾಗುತ್ತದೆ. ದೇಶದಲ್ಲಿ ಅಪರಾಧ ಎಸಗುವ ಯಾವುದೇ ವ್ಯಕ್ತಿ ದಂಡವನ್ನು ಪಾವತಿಸಬೇಕು. ಮನಶ್ಶಾಸ್ತ್ರಜ್ಞರಿಂದ ನಡೆಸಲ್ಪಡುವ ಪುನರ್ವಸತಿ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಹಲವಾರು ವರ್ಷಗಳವರೆಗೆ ಜೈಲಿನಲ್ಲಿ ಕಳೆದ ಕೈದಿಗಳಿಗೆ, ಶಿಕ್ಷೆಯನ್ನು ಕಡಿಮೆ ಮಾಡಲಾಗುತ್ತದೆ. ಇದೆಲ್ಲವೂ ಇಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗ್ತಿದೆ.