ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ತಿಳಿದಿರಬೇಕು. ಪ್ರತಿ ದಿನ ವಾಹನ ಚಲಾಯಿಸುವವರಿಗೂ ಕೆಲವೊಮ್ಮೆ ಟ್ರಾಫಿಕ್ ನಿಯಮ ತಿಳಿದಿರುವುದಿಲ್ಲ. ರಸ್ತೆ ಪಕ್ಕದಲ್ಲಿ ಹಾಕಿಸುವ ಸೂಚನೆಗಳನ್ನು ಗಮನಿಸದೆ ಅನೇಕರು ವಾಹನ ಚಲಾಯಿಸುತ್ತಾರೆ. ಇದ್ರಿಂದ ನಿಯಮ ಮುರಿದು ದಂಡ ಕಟ್ಟುತ್ತಾರೆ. ಅಪಘಾತಕ್ಕೂ ಇದು ಕಾರಣವಾಗುತ್ತದೆ.
ವಾಹನ ಚಲಾಯಿಸುವವರು ನೋ ಫ್ರೀ ಲೆಫ್ಟ್ ನಿಯಮದ ಬಗ್ಗೆಯೂ ತಿಳಿದಿರಬೇಕು. ಅನೇಕ ರಾಜ್ಯಗಳಲ್ಲಿ ನೋ ಫ್ರೀ ಲೆಫ್ಟ್ ಜಾರಿಯಲ್ಲಿದೆ. ಅನೇಕರಿಗೆ ಇದ್ರ ಬಗ್ಗೆ ತಿಳಿದಿಲ್ಲ. ನಿಯಮ ತಿಳಿಯದೆ ಎಡಕ್ಕೆ ತಿರುಗಿ ದಂಡ ಕಟ್ಟುತ್ತಾರೆ.
ವಾಹನ ಚಲಾಯಿಸುವಾಗ ಟ್ರಾಫಿಕ್ ಸಿಗ್ನಲ್ ನೋಡಬಹುದು. ಕೆಲವು ಕಡೆ ನೇರವಾಗಿರುವ ರಸ್ತೆಯಲ್ಲಿ ಎಡಕ್ಕೊಂದು ತಿರುವಿರುತ್ತದೆ. ಟ್ರಾಫಿಕ್ ಲೈಟ್ ಕೆಂಪಗಿದ್ದಾಗ ನೀವು ಎಡಕ್ಕೆ ತಿರುಗುವಂತಿಲ್ಲ. ಟ್ರಾಫಿಕ್ ಲೈಟ್ ಹಸಿರಾದಾಗ ಮಾತ್ರ ನೀವು ಎಡಕ್ಕೆ ತಿರುಗಬಹುದು. ಒಂದು ವೇಳೆ ಲೈಟ್ ಕೆಂಪಿದ್ದಾಗಲೇ ನೀವು ಎಡಕ್ಕೆ ತಿರುಗಿದ್ರೆ ನಿಮಗೆ ದಂಡ ವಿಧಿಸಲಾಗುತ್ತದೆ.
ಫ್ರೀ ಲೆಫ್ಟ್ ಇಲ್ಲದ ಜಾಗದಲ್ಲಿ ಮೊದಲೇ ಸೂಚನಾ ಫಲಕವಿರುತ್ತದೆ. ಹಿಂದಿ, ಇಂಗ್ಲೀಷ್ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಫ್ರೀ ಲೆಫ್ಟ್ ಬಗ್ಗೆ ಸೂಚನೆಯಿರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ದಂಡದ ಪ್ರಮಾಣ ಭಿನ್ನವಾಗಿದೆ.