
ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸುಲಭದ ಕೆಲಸವಲ್ಲ. ನೀವು ಎಷ್ಟು ಕಾಳಜಿ ವಹಿಸಿದರೂ ತ್ವಚೆ ಬಿರುಕು ಬಿಟ್ಟು, ತುಟಿ ಒಡೆದು ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ.
ಸ್ನಾನ ಮಾಡುವಾಗ ಚಳಿಗೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಅತಿ ಬಿಸಿ ನೀರು ಬಳಸದಿರಿ. ಇದರಿಂದ ತ್ವಚೆ ಮತ್ತಷ್ಟು ಒಣಗಿ, ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಅದರ ಬದಲು ಉಗುರು ಬೆಚ್ಚಗಿನ ನೀರಿನಲ್ಲೇ ಸ್ನಾನ ಮಾಡಿ. ಮುಖ ತೊಳೆಯಲು ತಣ್ಣೀರು ಬಳಸುವುದು ಒಳ್ಳೆಯದು.
ಇನ್ನು ಸ್ನಾನದ ಅವಧಿಯನ್ನು ಕಡಿಮೆ ಮಾಡಿ. ಅರ್ಧ ಗಂಟೆ ಸ್ನಾನ ಮಾಡುವ ಬದಲು, ಅಂದರೆ ಅಷ್ಟು ಹೊತ್ತು ದೇಹವನ್ನು ಒದ್ದೆಯಾಗಿಡುವ ಬದಲು ಹತ್ತು ನಿಮಿಷದೊಳಗೆ ಸ್ನಾನಮಾಡಿ ಮುಗಿಸಿ, ಮೈ ಒರೆಸಿಕೊಳ್ಳಿ.
ಹೆಚ್ಚು ಸೋಪು ಹಾಕಿ ತಿಕ್ಕುವ ಅಭ್ಯಾಸವಿದ್ದರೆ ಅದನ್ನು ಕಡಿಮೆ ಮಾಡಿ. ಸ್ನಾನ ಮಾಡಿ ಬಂದಾಕ್ಷಣ ಮಾಯಿಸ್ಚರೈಸರ್ ಹಚ್ಚಿಕೊಳ್ಳಲು ಮರೆಯದಿರಿ. ಚಳಿಗಾಲದಲ್ಲಿ ಬಿಸಿಲಿಗೆ ಹೋಗುವ ಮುನ್ನ ಮರೆಯದೆ ಸನ್ ಸ್ಕ್ರೀನ್ ಲೋಷನ್ ಹಚ್ಚಿ. ಇದು ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುತ್ತದೆ.