ನಾಲಿಗೆಯ ಸವಿ ಸುಖಕ್ಕೆ ಚೀಲವನ್ನು ತುಂಬಿದರೆ ಹಲವು ಶೂಲೆಗಳು ಬಾಧಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಶೂಲೆ ಅಂದರೆ ರೋಗ. ಸಿಕ್ಕಿತೆಂದು ಹೊಟ್ಟೆ ತುಂಬ ತಿಂದರೆ ರೋಗ ಬಾಧಿಸುತ್ತವೆ. ಹಾಗಾಗಿ ಇನ್ನು ಎರಡು ತುತ್ತು ತಿನ್ನಬೇಕು ಎನಿಸುವಾಗಲೇ ಊಟ ಮುಗಿಸಬೇಕು.
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಕುರಿತು ಕೆಲವರು ಹೀಗೆ ಸಲಹೆ ನೀಡುತ್ತಾರೆ.
ಬೆಳಗಿನ ಉಪಹಾರವನ್ನು ರಾಜನಂತೆ ಸೇವಿಸು, ಮಧ್ಯಾಹ್ನ ಸಾಮಾನ್ಯನಂತೆ ಊಟ ಮಾಡಿ, ರಾತ್ರಿ ಊಟವನ್ನು ಬಡವನಂತೆ ಮುಗಿಸು ಎಂದು ಹೇಳಲಾಗುತ್ತದೆ.
ದೈಹಿಕ ಶ್ರಮದ ಕೆಲಸಗಳಿಗೆ ಬೆಳಿಗ್ಗೆ ಹೊಟ್ಟೆ ತುಂಬ ಊಟ, ತಿಂಡಿ ಅವಶ್ಯಕ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಲು ಶಕ್ತಿ ಬೇಕು. ಕಚೇರಿ ಮೊದಲಾದ ಕೆಲಸಗಳಿಗೆ ಬೆಳಿಗ್ಗೆಯೇ ಹೊಟ್ಟೆ ತುಂಬ ತಿಂದರೆ ಒಮ್ಮೊಮ್ಮೆ ತೂಕಡಿಕೆ, ನಿದ್ದೆ ಬರುವ ಸಾಧ್ಯತೆ ಇರುತ್ತದೆ.
ತಿಂಡಿ ಮತ್ತು ಊಟದ ನಡುವೆ ಕನಿಷ್ಠ 4 ಗಂಟೆ ಸಮಯ ಇರಬೇಕು. ಇದರಿಂದ ಜೀರ್ಣ ಕ್ರಿಯೆಗೆ ಅನುಕೂಲವಾಗುತ್ತದೆ.
ಹಸಿವಾಗದೇ ಊಟ ಮಾಡಬೇಡಿ. ಇದರಿಂದ ಅಜೀರ್ಣ, ಅತಿಸಾರ ಆಗಬಹುದು. ಇನ್ನು ಹಸಿವಾದರೂ ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ, ಇದು ದಿನಾ ಮುಂದುವರೆದಲ್ಲಿ ಆಮ್ಲಪಿತ್ತ (Acidity) ಬರಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಸೇವಿಸಿರಿ.