ಲಿಪ್ ಸ್ಟಿಕ್ ಹಾಕಿ ಮದುವೆ ಸಮಾರಂಭಗಳಿಗೆ ಹೊರಟಿರೆಂದರೆ ಅದರ ಗತ್ತೇ ಬೇರೆ. ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆಯ ಮಧ್ಯೆ ಕೆಲವೇ ಸಮಯದಲ್ಲಿ ಕರಗಿ ನೀರಾಗುವ ಲಿಪ್ ಸ್ಟಿಕ್ ಕುರಿತು ಬೇಸರ ಮೂಡುವುದೂ ಉಂಟು. ಇದರ ನಿವಾರಣೆಗೆ ನೀವು ಹೀಗೆ ಮಾಡಬಹುದು.
ಲಿಪ್ ಸ್ಟಿಕ್ ಆಯ್ಕೆ ಮಾಡುವಾಗಲೇ ರಾಸಾಯನಿಕ ವಸ್ತುಗಳನ್ನು ಬಳಸದ ಉತ್ಪನ್ನಗಳನ್ನೇ ಆಯ್ಕೆ ಮಾಡಿ. ಲಿಪ್ ಸ್ಟಿಕ್ ಹಚ್ಚುವ ಮುನ್ನ ತುಟಿಗಳನ್ನು ಸ್ವಚ್ಛಗೊಳಿಸಿ. ಒಡೆದ ತುಟಿಯ ಮೇಲೆ ಲಿಪ್ ಸ್ಟಿಕ್ ಹಚ್ಚದಿರಿ.
ಒಣ ತುಟಿಯ ಮೇಲೂ ಲಿಪ್ ಸ್ಟಿಕ್ ಹಚ್ಚುವುದು ತಪ್ಪು. ಮೊದಲು ನಿಮ್ಮ ತುಟಿಗಳನ್ನು ಮಾಯಿಸ್ಚರೈಸ್ ಮಾಡಿ. ಬಳಿಕ ಲಿಪ್ ಜೆಲ್ ಬಳಸಿ ತುಟಿಗೆ ತೇವಾಂಶ ಸಿಗುವಂತೆ ಮಾಡಿ. ಬಳಿಕ ಲಿಪ್ ಸ್ಟಿಕ್ ಹಚ್ಚಿ. ಬಣ್ಣ ನಿಮ್ಮ ತುಟಿಗಳಿಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಮೊದಲೇ ಪರೀಕ್ಷಿಸಿಕೊಳ್ಳಿ.
ಲಿಪ್ ಪೆನ್ಸಿಲ್ ಮೂಲಕ ತುಟಿಗಳ ಬದಿಯನ್ನು ಸರಿಯಾಗಿ ಹೊಂದಿಸಿಕೊಳ್ಳಿ. ಈ ಮೂಲಕ ನಿಮ್ಮ ತುಟಿಗಳಿಗೆ ಸರಿಯಾದ ಶೇಪ್ ಕೊಡುವುದು ಸಾಧ್ಯವಾಗುತ್ತದೆ. ದಪ್ಪಗಾಗಿ ಹಚ್ಚಿಕೊಂಡ ಲಿಪ್ ಸ್ಟಿಕ್ ಹೆಚ್ಚು ಹೊತ್ತು ತುಟಿಗಳ ಮೇಲೆ ಉಳಿದುಕೊಳ್ಳುತ್ತದೆ ಎಂಬುದನ್ನು ಮರೆಯದಿರಿ.