ಆಯುರ್ವೇದ ಔಷಧೀಯ ಪದ್ದತಿಯಲ್ಲಿ ಕಲ್ಲುಸಕ್ಕರೆಗೆ ಹೆಚ್ಚಿನ ಮಹತ್ವವಿದೆ. ಹಲವು ರೋಗಗಳಿಗೆ ಔಷಧಿಯೊಂದಿಗೆ ಕಲ್ಲುಸಕ್ಕರೆಯನ್ನೂ ಸೇವಿಸಲು ಹೇಳಲಾಗುತ್ತದೆ.
ಹಾಲಿನ ಕೆನೆಗೆ ಕರಿಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸುವುದರಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ. ವಿಪರೀತ ಕೆಮ್ಮು ಬಿಡದೆ ಕಾಡುವಾಗ ಕಲ್ಲುಸಕ್ಕರೆ ತುಂಡೊಂದನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ. ಅದರ ರಸವನ್ನು ಮಾತ್ರ ನುಂಗಿ. ಜಗಿಯದಿರಿ. ಇದರಿಂದ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ. ಮಕ್ಕಳಿಗೂ ಇದೇ ವಿಧಾನ ಅನುಸರಿಸಲು ಹೇಳಿ.
ಗಂಟಲು ನೋವಿದ್ದರೆ ಚಿಟಿಕೆ ಕಾಳು ಮೆಣಸಿನ ಪುಡಿಗೆ ಜೇನುತುಪ್ಪ ಹಾಗೂ ಕಲ್ಲುಸಕ್ಕರೆ ಪುಡಿ ಸೇರಿಸಿ. ರಾತ್ರಿ ಊಟವಾದ ಬಳಿಕ ಇದನ್ನು ಸೇವಿಸಿ. ಗಂಟಲಿನ ಸೋಂಕು ಇದರಿಂದ ಗುಣವಾಗುತ್ತದೆ.
ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು, ಆಯಾಸ ಮತ್ತು ದುರ್ಬಲತೆಯಿಂದ ಮುಕ್ತಿ ನೀಡಲು ಕಲ್ಲುಸಕ್ಕರೆ ಸೇವಿಸಿ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.
ದೃಷ್ಟಿಶಕ್ತಿಯನ್ನೂ ಚುರುಕುಗೊಳಿಸುತ್ತದೆ. ಹಾಲುಣಿಸುವ ತಾಯಂದಿರ ಎದೆಹಾಲನ್ನು ಹೆಚ್ಚಿಸುತ್ತದೆ. ಇದು ಬ್ರೈನ್ ಟಾನಿಕ್ ಆಗಿಯೂ ಕೆಲಸ ಮಾಡುತ್ತದೆ.