ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಈಸೂರು, ಏಸೂರು ಕೊಟ್ಟರು ಈಸೂರು ಕೊಡೆವು” ಎಂದು ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು.
1942 ರ ಆಗಸ್ಟ್ 8 ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ “ಭಾರತ ಬಿಟ್ಟು ತೊಲಗಿ”, “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಈ ಚಳವಳಿಯಲ್ಲಿ ಈಸೂರು ಗ್ರಾಮ ಮೇಲುಗೈ ಸಾಧಿಸಿದೆ ಎಂದರೆ ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಈಸೂರು ಗ್ರಾಮದ ಜನರು ಬ್ರಿಟಿಷರಿಗೆ ಸೆಡ್ಡು ಹೊಡೆದು, ಅವರೊಂದಿಗೆ ಕಾದಾಡಿ ವೀರ ಮರಣ ಹೊಂದಿದರು.
ಈಸೂರಿನಲ್ಲಿ 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಲಾಯಿತು. ಪ್ರತಿ ದಿನ ಗ್ರಾಮದ ದೇವರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಊರ ಬೀದಿಗಳಲ್ಲಿ ವಂದೇ ಮಾತರಂ, ಭಾರತ ಮಾತಕೀ ಜೈ ಘೋಷಣೆಯೊಂದಿಗೆ ಮೆರವಣಿಗೆ ನಡೆಸುತ್ತಿದ್ದರು. ಬ್ರಿಟಿಷ್ ಕಂದಾಯ ಅಧಿಕಾರಿಗಳು ಕಂದಾಯ ಕಟ್ಟುವಂತೆ ಬಂದು ಊರಿನ ಗ್ರಾಮಸ್ಥರಿಗೆ ಕೇಳಿದಾಗ ಅವರ ಲೆಕ್ಕ ಪುಸ್ತಕವನ್ನು ಕಸಿದುಕೊಂಡು, ಗಾಂಧಿ ಟೋಪಿ ಧರಿಸುವಂತೆ ಹೇಳಿದರು. ಅವರು ಧರಿಸದೇ ವಾಪಸ್ಸು ಹೋಗಿ ಶಿಕಾರಿಪುರದ ಅಮಲ್ದಾರ್ ಗೆ ದೂರು ನೀಡಿದರು. ಇದರಿಂದ ಈಸೂರಿನ ಜನತೆ ಊರ ದ್ವಾರ ಬಾಗಿಲಿಗೆ “ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ” ಎಂದು ನಾಮ ಫಲಕವನ್ನು ಹಾಕಿದರು. ಗ್ರಾಮದ ಮಕ್ಕಳಾದ ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ.ಜಿ ಮಲ್ಲಯ್ಯ ಅವರನ್ನು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿಕೊಂಡು ಜವಾಬ್ದಾರಿ ಸರ್ಕಾರವನ್ನು ರಚಿಸಿಕೊಂಡರು.
ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಘಟನೆ
ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ.ಜಿ ಮಲ್ಲಯ್ಯ ಅವರನ್ನು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕ ಮಾಡಿಕೊಂಡ ವಿಷಯ ತಿಳಿದ ಶಿಕಾರಿಪುರದ ಅಮಲ್ದಾರ್ ಚೆನ್ನಕೃಷ್ಣಪ್ಪ ಮತ್ತು ಪೋಲೀಸ್ ಸಬ್ ಇನ್ಸ್ಪೆಕ್ಟರ್ ಕೆಂಚೇಗೌಡ ಅವರು 28/09/1942 ರಂದು ಸ್ವತಂತ್ರ ಗ್ರಾಮ ಈಸೂರಿಗೆ ಬಂದು ದ್ವಾರ ಬಾಗಿಲಿಗೆ ಹಾಕಿದ ನಾಮ ಫಲಕ ಮತ್ತು ಹೂವಿನ ತೋರಣಗಳನ್ನು ಕಿತ್ತು ಹಾಕಿದರು. ನಂತರ ದೇವಸ್ಥಾನದ ಹತ್ತಿರ ಬಂದು ಜನರನ್ನು ಹಿಂಸೆ ಮಾಡತೊಡಗಿದರು. ಪೊಲೀಸ್ ಅಧಿಕಾರಿ ಕೆಂಚೇಗೌಡ ಜನರ ಮೇಲೆ ಲಾಠಿ ಚಾರ್ಜ್ ಮಾಡಿದರು. ಆದರೂ ಶಾಂತವಾಗಿದ್ದ ಯುವಕರ ತಂಡ ಅದನ್ನು ಸಹಿಸಿಕೊಂಡು ಸುಮ್ಮನಿದ್ದರು. ಆದರೆ ಇಷ್ಟಕ್ಕೆ ಸುಮ್ಮನಿರದ ಪೊಲೀಸ್ ಕೆಂಚೇಗೌಡ ಜನರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದರು.
ಗುಂಡು ಊರ ಹಿರಿಯರಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕರು ಪೊಲೀಸ್ ಕೆಂಚೇಗೌಡ ಮತ್ತು ಅಮಲ್ದಾರ್ ಚೆನ್ನಕೃಷ್ಣಪ್ಪ ಅವರನ್ನು ಹೊಡೆದು ಹಾಕಿದರು. ಆಗ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಆಯಿತು.
ಸ್ಮಶಾನವಾದ ಈಸೂರು ಗ್ರಾಮ
ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ಮಿಲಿಟರಿ ಪಡೆಯೊಂದಿಗೆ ಈಸೂರು ಗ್ರಾಮಕ್ಕೆ ಆಗಮಿಸಿತು. ಈ ಸುದ್ದಿ ತಿಳಿದು ಇಡೀ ಊರಿಗೆ ಊರೇ ತಲೆ ಮರಿಸಿಕೊಂಡಿತು. ಈಸೂರು ಗ್ರಾಮದ ಮನೆ ಮನೆಗೆ ಬೀಗ ಹಾಕಿಕೊಂಡು ಇಡೀ ಊರು ಸ್ಮಶಾನದಂತಾಗಿತ್ತು. ಪೊಲೀಸ್ ಅಧಿಕಾರಿಗಳು ಆರೋಪಿಗಳ ಪಟ್ಟಿ ಸಿದ್ಧ ಮಾಡಿ 11 ಜನರಿಗೆ ಮರಣದಂಡನೆ, 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಿದರು.
ವೀರ ಮರಣ ಹೊಂದಿದ ಈಸೂರಿನ ವೀರರು
ನ್ಯಾಯಲಯದ ಆದೇಶದ ಪ್ರಕಾರ ಕೆ.ಗುರಪ್ಪ ಬಿನ್ ಈಶ್ವರಪ್ಪ ಕುಮಾರ್ ಅವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಜಿನಹಳ್ಳಿ ಮಲ್ಲಪ್ಪ ಇವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಸೂರ್ಯನಾರಯಣಾಚಾರ್ ಬಿನ್ ಪಂಪಪ್ಪಚಾರ್ ಇವರನ್ನು 09-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಇವರಲ್ಲಿ ಬಡಕಳ್ಳಿ ಹಾಲಪ್ಪ ಬಿನ್ ಬಸಪ್ಪ ಹಾಗೂ ಅಂಗಡಿ ಹಾಲಪ್ಪ ಎಂಬವರು ತಲೆಮರೆಸಿಕೊಂಡಿದ್ದರು. ಅವರ ಬದಲು ಬಿ.ಹಾಲಪ್ಪ ಅವರನ್ನು 9-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಗೌಡ್ರ ಶಂಕ್ರಪ್ಪ ಬಿನ್ ಹೊಳಿಯಪ್ಪ 10-03-43 ರಲ್ಲಿ ಇವರನ್ನು ಅಪರಾಧಿಗಳು ಎಂದು ಗಲ್ಲಿಗೇರಿಸಲಾಯಿತು. ಇನ್ನೂ 23 ಜನರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಯಿತು. ಇದರಲ್ಲಿ ಮಹಿಳೆಯರು ಇದ್ದರು. ಇವರಲ್ಲಿ ಜೀವಂತವಾಗಿ ಇರುವವರು ಎಸ್.ಎಸ್ ಹುಚ್ಚರಾಯಪ್ಪನವರು ಮಾತ್ರ. ಅವರು ಇನ್ನೂ ಈಸೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಇದ್ದಾರೆ.
ಈಸೂರು ಸ್ವಾತಂತ್ರö್ಯ ಹೋರಾಟಗಾರರ ಸ್ಮಾರಕ ಅಭಿವೃದ್ಧಿ:
ಈಸೂರು ಹೋರಾಟದ ಇತಿಹಾಸವನ್ನು ಸಾರುವ ದೃಷ್ಟಿಯಿಂದ ಹುತಾತ್ಮರ ಸ್ಮಾರಕಕ್ಕೆ ರೂ.5 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು ಈಸೂರನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲಾಗುತ್ತಿದೆ. ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿಯಲ್ಲಿದೆ.
ಭಾರತದಲ್ಲಿ ಎಲ್ಲಿಯೂ ನೋಡ ಸಿಗದ ವಿಶೇಷವಾದ ಆಲಂಕರಿಕ ಶೈಲಿಯಲ್ಲಿ ಸ್ಮಾರಕ ಭವನವನ್ನು ವಿನ್ಯಾಸ ಮಾಡಲಾಗುತ್ತಿದ್ದು ಸುತ್ತಲು ಕಲ್ಲಿನಿಂದ ಆಕರ್ಷಕ ತಡೆಗೊಡೆ ರೀತಿ ವಿನ್ಯಾಸಗೊಳಿಸಿ ಸ್ಮಾರಕದ ಒಳಗೆ ಗಲ್ಲಿಗೇರಿದ ಹೋರಾಟಗಾರರ ಹೆಸರುರ್ಳಳ ಕಲ್ಲುಗಳನ್ನು ನಿರ್ಮಿಲಾಗುತ್ತಿದೆ ಜೊತೆಗೆ ಗ್ರಂಥಾಲಯ, ಅತಿಥಿ ಗೃಹ, ಶೌಚಾಲಯ, ಗಾರ್ಡನ್ ನಿರ್ಮಿಸಲಾಗುತ್ತಿದೆ.
ಕ್ವಿಟ್ ಇಂಡಿಯಾ ದಿನಾಚರಣೆ:
ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಸ್ತಂಭದ ಬಳಿ ಪ್ರತಿ ವರ್ಷ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಗಸ್ಟ್ 9 ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಸಿ ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ ಈಸೂರು ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಕ್ವಿಟ್ ಇಂಡಿಯಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.