ಮಧುಮೇಹ ರೋಗಿಗಳ ಸಂಖ್ಯೆ ಅತಿ ವೇಗದಲ್ಲಿ ಹೆಚ್ಚಾಗ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ರೋಗಕ್ಕೆ ಜನರು ಬಲಿ ಆಗ್ತಿದ್ದಾರೆ. ಯುವಜನತೆಯಲ್ಲೂ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ತಿರೋದು ಆತಂಕ ಸೃಷ್ಟಿಸಿದೆ.
ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲು ದೊಡ್ಡ ಕಾರಣವೆಂದ್ರೆ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ರಾತ್ರಿ ಕೆಲಸ ಮಾಡುವವರು ಈ ಮಧುಮೇಹಕ್ಕೆ ಹೆಚ್ಚು ಒಳಗಾಗ್ತಾರೆ. ಅದೇ ರೀತಿ ಮಧುಮೇಹಿಗಳು ರಾತ್ರಿ ಕೆಲಸ ಮಾಡಿದ್ರೆ ಮತ್ತಷ್ಟು ಅಪಾಯವನ್ನ ಮೈಮೇಲೆ ಎಳೆದುಕೊಂಡಂತೆ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವ ಜನರು ಯಾವುದೇ ಕಾರಣಕ್ಕೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು. ರಾತ್ರಿ ಕೆಲಸ ಮಾಡಿದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.
ರಾತ್ರಿ ಕೆಲಸ ಮಾಡಿದ್ರೆ ಏಕೆ ಹೆಚ್ಚಾಗುತ್ತೆ ಮಧುಮೇಹ ? : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹಗಲಿನಲ್ಲಿ ನಿದ್ರೆ ಮಾಡ್ಬೇಕಾಗುತ್ತದೆ. ಅನೇಕರು ಹಗಲಿನಲ್ಲೂ ಸರಿಯಾಗಿ ನಿದ್ರೆ ಮಾಡೋದಿಲ್ಲ. ಇದ್ರಿಂದ ನಿದ್ರಾಹೀನತೆ ಕಾಡುತ್ತದೆ. ಜೊತೆಗೆ ಬಾಡಿ ಕ್ಲಾಕ್ ಮೇಲೆ ಪರಿಣಾಮ ಬೀರುತ್ತದೆ. ಚಯಾಪಚಯ ಸಂಪೂರ್ಣ ಹದಗೆಡುತ್ತದೆ. ಇನ್ಸುಲಿನ್ ಪ್ರತಿರೋಧದ ಸಮಸ್ಯೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರನ್ನು ಕಾಡುತ್ತದೆ. ಇನ್ಸುಲಿನ್ ಅನ್ನು ದೇಹ ಸರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಮಧುಮೇಹದ ಸಮಸ್ಯೆ ಉಂಟಾಗುತ್ತದೆ.
ಯುವಕರಲ್ಲಿ ಹೆಚ್ಚಾಗ್ತಿದೆ ಮಧುಮೇಹ : ಯುವಕರಲ್ಲಿ ಮಧುಮೇಹ ಸಂಖ್ಯೆ ಹೆಚ್ಚಾಗಲೂ ಈ ರಾತ್ರಿ ಪಾಳಿ ಕೆಲಸವೇ ಕಾರಣ ಎನ್ನುತ್ತಾರೆ ತಜ್ಞರು. ಬಹುತೇಕ ಯುವಕರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಅಲ್ಲಿ ರಾತ್ರಿ ಪಾಳಿ ಹೆಚ್ಚಿರುತ್ತದೆ. ರಾತ್ರಿ ಪೂರ್ತಿ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವ ಕಾರಣಕ್ಕೆ ಮಧುಮೇಹ ವೇಗವಾಗಿ ಬೆಳೆಯುತ್ತದೆ. ದೈಹಿಕ ವ್ಯಾಯಾಮದ ಕೊರತೆಯಿಂದ ಬೊಜ್ಜು ಕೂಡ ಹೆಚ್ಚಾಗುತ್ತದೆ. ಇದು ಪ್ರಿಡಿಯಾಬಿಟಿಸ್ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ರಾತ್ರಿ ಪಾಳಿ ಅನಿವಾರ್ಯವಾಗಿದ್ರೆ ಹೀಗೆ ಮಾಡಿ : ರಾತ್ರಿ ಪಾಳಿಯನ್ನು ತಪ್ಪಿಸೋದು ಅನೇಕರಿಗೆ ಕಷ್ಟ. ಕೆಲಸ ಅನಿವಾರ್ಯವಾಗಿರುತ್ತದೆ. ನೀವೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತಿದ್ದರೆ ಒಂದೇ ಸ್ಥಳದಲ್ಲಿ ತುಂಬಾ ಸಮಯ ಕುಳಿತುಕೊಳ್ಳಬೇಡಿ. ದೈಹಿಕ ವ್ಯಾಯಾಮಕ್ಕೆ ಸಮಯ ನೀಡಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಿ. ಹಾಗೆಯೇ ಆಲ್ಕೋಹಾಲ್, ಸಕ್ಕರೆ ಆಹಾರದಿಂದ ದೂರವಿರಿ.