ಕೊರೊನಾ ದಿನಕ್ಕೊಂದು ರೂಪಾಂತರ ಪಡೆಯುತ್ತಿದೆ ಅಂದ್ರೆ ತಪ್ಪಾಗಲಾರದು. ಕೊರೊನಾ,ಡೆಲ್ಟಾ ಈಗ ಒಮಿಕ್ರೋನ್.
ಕೊರೊನಾ ಆರಂಭದಲ್ಲಿಯೇ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಜರ್ ಬಳಕೆ ಬಗ್ಗೆ ಜನರನ್ನು ಜಾಗೃತಗೊಳಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಎಲ್ಲ ದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಆದ್ರೆ ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಮಾಸ್ಕ್ ಬಳಕೆಯನ್ನು ಕಡಿಮೆ ಮಾಡ್ತಾರೆ. ಇದು ತಪ್ಪು. ಕೊರೊನಾ ಸಂಪೂರ್ಣವಾಗಿ ಹೋಗುವವರೆಗೂ ಮಾಸ್ಕ್ ಅನಿವಾರ್ಯ ಎನ್ನುತ್ತಾರೆ ತಜ್ಞರು.
ಕೊರೊನಾದ ಯಾವುದೇ ರೂಪಾಂತರವಿರಲಿ ಅದನ್ನು ತಡೆಯಲು ಮಾಸ್ಕ್ ಬಹಳ ಮುಖ್ಯ ವಿಧಾನವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸಬೇಕೆನ್ನುವ ಕಾರಣಕ್ಕೆ ಅನೇಕರು ಮಾಸ್ಕ್ ಧರಿಸುತ್ತಾರೆ. ಮಾಸ್ಕ್ ಧರಿಸುವ ವೇಳೆ ನಿರ್ಲಕ್ಷ್ಯ ಮಾಡಿದ್ರೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದೆ.
ಮಾಸ್ಕ್ ಧರಿಸುವ ವೇಳೆ ಬಾಯಿ ಹಾಗೂ ಮೂಗು ಎರಡೂ ಮುಚ್ಚುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸುವಾಗ ಹಾಗೂ ತೆಗೆಯುವಾಗ ಕೈಗಳನ್ನು ಸ್ವಚ್ಛವಾಗಿ ತೊಳೆದಿರಬೇಕು. ಕೈನಲ್ಲಿರುವ ಕೊಳಕು ಅಥವಾ ಸೋಂಕು ಮಾಸ್ಕ್ ತೆಗೆಯುವ ಸಂದರ್ಭದಲ್ಲಿ ಉಸಿರು ಸೇರುವ ಸಾಧ್ಯತೆಯಿರುತ್ತದೆ. ಯಾವ ಮಾಸ್ಕ್ ಧರಿಸಬೇಕು ಎಂಬ ಪ್ರಶ್ನೆ ಕೂಡ ಕಾಡುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಮಾಸ್ಕ್ ಗಳಿವೆ. ಎನ್ -95, ಬಟ್ಟೆ ಮಾಸ್ಕ್, ಸರ್ಜಿಕಲ್ ಮಾಸ್ಕ್ ಹೀಗೆ ಅನೇಕ ಮಾಸ್ಕ್ ಗಳಿವೆ. ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಗಳು ಶೇಕಡಾ 70ರಷ್ಟು ಕೊರೊನಾ ತಡೆಯಲು ಪರಿಣಾಮಕಾರಿ. ಬಟ್ಟೆ ಮಾಸ್ಕ್ ತೊಳೆದಂತೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಹಾಗಾಗಿ ಮೂರು ಲೇಯರ್ ಇರುವ ಹಾಗೂ ಫಿಟೆಡ್ ಮಾಸ್ಕ್ ಧರಿಸುವುದು ಒಳ್ಳೆಯದೆಂದು ತಜ್ಞರು ಹೇಳಿದ್ದಾರೆ.