ಭಾರತೀಯ ಸೇನೆಯ ಹೆಲಿಕಾಪ್ಟರ್ ದುರಂತದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣಕ್ಕೀಡಾಗಿದ್ದಾರೆ. ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯೊಂದಿಗೆ ಬಿಪಿನ್ ರಾವತ್ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು.
ಹೆಲಿಕಾಪ್ಟರ್ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಡಿಎನ್ಎ ಪರೀಕ್ಷೆಯ ಮೂಲಕ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ದುರಂತ ಸಂಭವಿಸುತ್ತಿದ್ದಂತೆಯೇ ಬಿಪಿನ್ ರಾವತ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಜನರಲ್ ಬಿಪಿನ್ ರಾವತ್ ದೇಶದ ಮೊದಲ ಸೇನಾಪಡೆಗಳ ಮುಖ್ಯಸ್ಥರಾಗಿದ್ದಾರೆ. 2020ರ ಜನವರಿ 1ರಂದು ಬಿಪಿನ್ ಈ ಹುದ್ದೆಗೆ ನೇಮಕಗೊಂಡಿದ್ದರು.
ಉತ್ತರಾಖಂಡ್ನ ಪೌರಿ ಎಂಬಲ್ಲಿ ಜನಿಸಿದ ಜನರಲ್ ಬಿಪಿನ್ ರಾವತ್ ಕುಟುಂಬ ಬರೋಬ್ಬರಿ 4 ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ದೀರ್ಘ ವರ್ಷದ ಸೇನಾ ಪಯಣದಲ್ಲಿ ಬಿಪಿನ್ ಪತ್ನಿ ಮಧುಲಿಕಾ ರಾವತ್ ಪತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಮೃತ ಮಧುಲಿಕಾ ರಾವತ್ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಮುಖ್ಯಸ್ಥರಾಗಿದ್ದರು.
ಮಧುಲಿಕಾ ರಾವತ್ ಸೇನಾ ಸಿಬ್ಬಂದಿಯ ಮಕ್ಕಳು ಹಾಗೂ ಪತ್ನಿಯಂದಿರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರಜ್ಞ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸಾಕಷ್ಟು ಸಾಮಾಜಿಕ ಅಭಿಯಾನಗಳ ಮೂಲಕ ಮಧುಲಿಕಾ ಹುತಾತ್ಮ ಯೋಧರ ಪತ್ನಿಯಂದಿರು, ಕ್ಯಾನ್ಸರ್ ರೋಗಿಗಳು, ದಿವ್ಯಾಂಗ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಹಾಗೂ ಮಧುಲಿಕಾ ರಾವತ್ ಕೃತಿಕಾ ರಾವತ್ ಸೇರಿದಂತೆ ಮತ್ತೊಬ್ಬ ಪುತ್ರಿಯನ್ನು ಅಗಲಿದ್ದಾರೆ.
ಬಿಪಿನ್ ರಾವತ್ ತಂದೆ ಲಕ್ಷ್ಮಣ ಸಿಂಗ್ ರಾವತ್ ಲೆಫ್ಟಿನಂಟ್ ಜನರಲ್ ಆಗಿ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದರು. ಬಿಪಿನ್ ರಾವತ್ ತಾಯಿ ಕಿಶನ್ ಸಿಂಗ್ ಪಾರ್ಮರ್ ಉತ್ತರಾಕಾಶಿಯ ಮಾಜಿ ಶಾಸಕನ ಪುತ್ರಿಯಾಗಿದ್ದಾರೆ.