ಕಾನೂನು ಎಲ್ಲ ಕಡೆಯೂ ಒಂದೇ ರೀತಿ ಇರುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಒಂದೊಂದು ಸರ್ಕಾರ ಒಂದೊಂದು ರೀತಿಯ ಕಾನೂನು ಜಾರಿಗೊಳಿಸುತ್ತದೆ. ಕೆಲವೊಂದು ದೇಶಗಳು ಅಪರಾಧಗಳನ್ನು ಹತ್ತಿಕ್ಕಲು ಕಠಿಣ ಕಾನೂನನ್ನು ಜಾರಿಗೊಳಿಸಿದೆ.
ಅಂತಹ ದೇಶಗಳಿಗೆ ಕ್ರಿಮಿನಲ್ ರೆಕಾರ್ಡ್ಸ್ ಇರುವವರು ಹೋಗಲು ಸಾಧ್ಯವೇ ಇಲ್ಲ. ಇನ್ನು ಕೆಲವು ದೇಶಗಳಲ್ಲಿ ಯಾವುದೇ ರೀತಿಯ ನಿರ್ಬಂಧವಿಲ್ಲ. ಅಲ್ಲಿ ಕ್ರಿಮಿನಲ್ ಹಿನ್ನಲೆ ಇರುವವರು ಕೂಡ ಆರಾಮಾಗಿ ತಿರುಗಬಹುದು.
ಕೆಲವು ದೇಶಗಳು ಕ್ರಿಮಿನಲ್ ರೆಕಾರ್ಡ್ ಇರುವ ವಿದೇಶಿಗರನ್ನು ತಮ್ಮ ದೇಶಕ್ಕೆ ಪ್ರವೇಶ ಮಾಡಲು ಬಿಡುವುದಿಲ್ಲ. ಯಾರಾದರು ಕ್ರಿಮಿನಲ್ ರೆಕಾರ್ಡ್ಸ್ ಇರುವ ವ್ಯಕ್ತಿಗಳು ಏರ್ ಪೋರ್ಟ್ ಗೆ ಬಂದರೂ ಅಲ್ಲೇ ಅವರನ್ನು ಬಂಧಿಸಿ ಗಡಿಪಾರು ಮಾಡಿಬಿಡುತ್ತಾರೆ. ಅರ್ಜೆಂಟಿನಾ, ಆಸ್ಟ್ರೇಲಿಯಾ, ಕೆನಡಾ, ಚೀನಾ ಮತ್ತು ಅಮೆರಿಕಾದಲ್ಲಿ ಅಪರಾಧಿಗಳಿಗೆ ಪ್ರವೇಶವಿಲ್ಲ.
ಕ್ಯೂಬಾ, ಇರಾನ್, ಇಸ್ರೇಲ್, ಜಪಾನ್, ಕೀನ್ಯಾ, ಮಕಾವು, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಥೈವಾನ್, ಬ್ರಿಟನ್ ಹಾಗೂ ಭಾರತದಲ್ಲಿ ಕೂಡ ಕ್ರಿಮಿನಲ್ ರೆಕಾರ್ಡ್ಸ್ ಹೊಂದಿರುವ ವಿದೇಶಿಗರಿಗೆ ಪ್ರವೇಶ ನಿಷಿದ್ಧವಾಗಿದೆ.
ಯಾವುದೇ ರೀತಿಯ ಕ್ರಿಮಿನಲ್ ದಾಖಲೆ ಇರುವವರು ಬ್ರಿಜಿಲ್, ಕಾಂಬೋಡಿಯಾ, ಚಿಲಿ, ಈಜಿಪ್ಟ್, ಇಥಿಯೋಪಿಯಾ, ಹಾಂಗ್ ಕಾಂಗ್, ಐರ್ಲೆಂಡ್, ಮಲೇಶಿಯಾ, ಮೆಕ್ಸಿಕೋ ಮುಂತಾದ ದೇಶಗಳಲ್ಲಿ ಸುತ್ತಾಡಬಹುದು. ಮೆಕ್ಸಿಕೋ, ನೇಪಾಳ, ಪೆರು, ಸಿಂಗಾಪುರ, ದಕ್ಷಿಣ ಕೊರಿಯಾ, ತಾಂಜಾನಿಯಾ, ಫಿಲಿಫೈನ್ಸ್, ಟುನೀಶಿಯಾ, ಟರ್ಕಿ, ಉಕ್ರೇನ್, ಯುಎಇ ದೇಶಗಳಲ್ಲಿ ಕೂಡ ಕ್ರಿಮಿನಲ್ಸ್ ಗೆ ಯಾವುದೇ ರೀತಿಯ ನಿರ್ಬಂಧವಿಲ್ಲ.
ಕೆಲವು ದೇಶಗಳು ಮೊದಲು ಕ್ರಿಮಿನಲ್ ದಾಖಲೆಗಳ ಕುರಿತು ವಿಚಾರಿಸದೇ ಇದ್ದರೂ ನಂತರದಲ್ಲಿ ಕೆಲವು ದಾಖಲೆ, ಪುರಾವೆಗಳನ್ನು ಪರಿಶೀಲಿಸಿದ ನಂತರ ಸಕ್ರಿಯ ಕಾನೂನನ್ನು ಜಾರಿಗೊಳಿಸಿ ಕ್ರಿಮಿನಲ್ಸ್ ಗಳಿಗೆ ಪ್ರವೇಶ ನಿಷೇಧ ಮಾಡಲೂಬಹುದು.
ಮಾನವ ಕಳ್ಳಸಾಗಣೆ, ಕೊಲೆ, ಉದ್ದೇಶಪೂರ್ವಕವಲ್ಲದ ಕೊಲೆ, ಲೈಂಗಿಕ ದೌರ್ಜನ್ಯ, ಅಪಹರಣ, ಮಕ್ಕಳ ಅಶ್ಲೀಲ ಚಿತ್ರಗಳು, ಮಾದಕ ವಸ್ತು ತಯಾರಿಕೆ ಮತ್ತು ಮಾರಾಟ, ಆಕ್ರಮಣ, ಪ್ರಾಣಿಗಳನ್ನು ಕೊಲ್ಲುವುದು, ಸೈಬರ್ ಕ್ರೈಂ, ವಾಹನ ಕಳ್ಳತನ ಮುಂತಾದ ಅಪರಾಧಗಳನ್ನು ಹೊಂದಿರುವವರು ವಿದೇಶ ಯಾತ್ರೆ ಮಾಡುವುದು ಕಷ್ಟ.
ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ಮಾಡುವುದಾದರೆ ಸಣ್ಣ ಸಣ್ಣ ಅಪರಾಧಗಳು ಕೂಡ ಗಣನೆಗೆ ಬರುತ್ತದೆ. ಉದಾಹರಣೆಗೆ ಸಣ್ಣ ಕಳ್ಳತನ, ಅಜಾಗರೂಕ ಚಾಲನೆ ಮುಂತಾದವುಗಳಿಂದ ನೀವು ಹೆಚ್ಚಿನ ತಪಾಸಣೆಗೆ ಒಳಗಾಗಬಹುದು. ಅದೇ ರೀತಿ ವೀಸಾ ಅರ್ಜಿಯಲ್ಲಿ ಅಥವಾ ಪ್ರವೇಶದ ಗಡಿಯಲ್ಲಿ ಸುಳ್ಳು ಹೇಳಿದರೂ ಮುಂದೆ ಗಂಭೀರ ಪರಿಣಾಮಗಳಾಗಬಹುದು.