
ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು ಅರ್ಥಮಾಡಿಕೊಳ್ಳುತ್ತಿದೆ.
ಅಂತರಾಷ್ಟ್ರೀಯ ಯೋಗದ ದಿನ ಮಾತ್ರ ಯೋಗ ಮಾಡಿದ್ರೆ ಸಾಲದು. ಪ್ರತಿ ನಿತ್ಯ ಯೋಗ ಮಾಡಬೇಕು. ಹಾಗೆ ಯೋಗಕ್ಕೆ ಸಂಬಂಧಿಸಿದ ನಿಯಮಗಳನ್ನ ಚೆನ್ನಾಗಿ ತಿಳಿದಿದ್ದಲ್ಲಿ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.
ಯೋಗ ತಜ್ಞರ ಪ್ರಕಾರ ಬೆಳಿಗ್ಗೆ ಮತ್ತು ಖಾಲಿ ಹೊಟ್ಟೆಯಲ್ಲಿ ಯೋಗ ಅಭ್ಯಾಸ ಮಾಡಬೇಕು. ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಹಗಲಿನಲ್ಲಿ ಅಥವಾ ಸಂಜೆ ಯೋಗಾಭ್ಯಾಸ ಮಾಡುತ್ತಿದ್ದರೆ, ಅದಕ್ಕೂ ಮೊದಲು ಮೂರು ಗಂಟೆಗಳ ಕಾಲ ಏನನ್ನೂ ತಿನ್ನಬೇಡಿ.
ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಶಾಂತಿ ಹೆಚ್ಚುತ್ತದೆ. ಇದಕ್ಕಾಗಿ ಯೋಗ ಮಾಡುವಾಗ ಆರಾಮದಾಯಕ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.
ಯೋಗಾಸನಗಳನ್ನು ಯಾವಾಗಲೂ ದಪ್ಪ ಹಾಸು ಅಥವಾ ಯೋಗ ಮ್ಯಾಟ್‌ಗಳ ಮೇಲೆ ಮಾಡಬೇಕು. ಇದರಿಂದಾಗಿ ಕೀಲುಗಳ ಮೇಲೆ ಅತಿಯಾದ ಒತ್ತಡ ಬೀಳುವುದಿಲ್ಲ.
ಯೋಗಾಭ್ಯಾಸವನ್ನು ಪ್ರಾರಂಭಿಸುವ ಮೊದಲು ಮಲವಿಸರ್ಜನೆ ಮಾಡಿ ಬರಬೇಕು. ಇದು ದೈಹಿಕ ಶಾಂತಿಯನ್ನು ನೀಡುತ್ತದೆ. ಹೊಟ್ಟೆಗೆ ಯಾವುದೇ ಹಾನಿಕಾರಕ ಒತ್ತಡವಿರುವುದಿಲ್ಲ. ಮೂಗು ಮತ್ತು ಗಂಟಲನ್ನೂ ಸ್ವಚ್ಛಗೊಳಿಸಬೇಕು.
ಯೋಗ ಮಾಡುವಾಗ ಯಾವಾಗಲೂ ಪ್ರಾರಂಭದಲ್ಲಿ ಸುಲಭವಾದ ಯೋಗಾಸನಗಳನ್ನು ಮಾಡಿ ನಂತರ ಕ್ರಮೇಣ ಕಷ್ಟಕರ ಮತ್ತು ಸವಾಲಿನ ಯೋಗಾಸನಗಳನ್ನು ಮಾಡಬೇಕು.
ಪ್ರತಿ ಯೋಗಾಸನದ ನಡುವೆ ಕನಿಷ್ಠ 10 ರಿಂದ 30 ಸೆಕೆಂಡುಗಳ ವಿಶ್ರಾಂತಿ ತೆಗೆದುಕೊಳ್ಳಬೇಕು.
ಯೋಗಾಸನಗಳನ್ನು ಯಾವಾಗಲೂ ಹೆಚ್ಚು ಗಾಳಿಯಾಡುವ ಮತ್ತು ಶಾಂತ ಸ್ಥಳದಲ್ಲಿ ಮಾಡಬೇಕು.
ಯೋಗದ ನಂತರ ಸ್ನಾನ ಮಾಡಬೇಕು. ಬೆವರಿನಿಂದಾಗಿ ರೋಗಾಣು ಬರುತ್ತವೆ. ಯೋಗ ಮಾಡುವ 20 ನಿಮಿಷ ಮೊದಲು ಅಥವಾ ನಂತರ 20 ನಿಮಿಷದ ಬಿಟ್ಟು ಸ್ನಾನ ಮಾಡಬೇಕು.
ಯೋಗ ಮಾಡಿದ ನಂತರ ಕನಿಷ್ಠ 1 ಗಂಟೆ ಬಿಟ್ಟು ಉಪಹಾರ ಸೇವನೆ ಮಾಡಬೇಕು. ಶಕ್ತಿ ಪಡೆಯಲು ಲಘು ಆಹಾರ ಸೇವನೆ ಮಾಡಬಹುದು.
ಯೋಗ ಪ್ರಯೋಜನಕಾರಿಯಾಗಲು ಪ್ರತಿದಿನ ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುವುದು ಅವಶ್ಯಕ.