
ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಡಿಸಿ ಮೇಲೆ ನೌಕರ ಚಾಕುವಿನಿಂದ ಹಲ್ಲೆ ನಡೆಸಿದ್ದು, ಕೈ ಬೆರಳಿಗೆ ಗಾಯವಾಗಿದೆ. ಚಿಕ್ಕಮಗಳೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಡಿಸಿ ಜಗದೀಶ್ ಕುಮಾರ್ ಗಾಯಗೊಂಡಿದ್ದು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ರಿತೇಶ್ ಕುಮಾರ್ ಏಕಾಏಕಿ ಜಗದೀಶ್ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಕೈ ಅಡ್ಡ ಹಿಡಿದ ಕಾರಣ ಬೆರಳಿಗೆ ಗಾಯವಾಗಿದ್ದು, ಘಟನೆಯ ನಂತರ ರಿತೇಶ್ ಕುಮಾರ್ ಪರಾರಿಯಾಗಿದ್ದಾನೆ. ರಿತೇಶ್ ಕುಮಾರ್ ಹಾಜರಾತಿ ಸರಿಯಿಲ್ಲದ ಕಾರಣಕ್ಕೆ ಆತನ ಕುಟುಂಬದವರನ್ನು ಕರೆಯಿಸಿ ಕೌನ್ಸೆಲಿಂಗ್ ನಡೆಸಲಾಗಿತ್ತು. ಕುಟುಂಬದವರ ಮನವಿ ಮೇರೆಗೆ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಿತೇಶ್ ಕುಮಾರ್ ಚಾಕುವಿನಿಂದ ದಾಳಿ ಮಾಡಿದ್ದಾನೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.