ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ನಾಲ್ಕು ಬಾಟಲಿ ರಕ್ತದ ವ್ಯವಸ್ಥೆ ಮಾಡಿ, ಆರೈಕೆ ಮಾಡಿ ಮಾನವೀಯತೆ ತೋರಿದ್ದಾರೆ.
28 ವರ್ಷದ ನಿಖಿತಾ ಚಾಕು ಇರಿತಕ್ಕೆ ಒಳಗಾದ ಮಹಿಳೆ. ದಿವಾಕರ್ ನನ್ನು ಪ್ರೀತಿಸಿ ಮದುವೆಯಾಗಿದ್ದರಿಂದ ಪೋಷಕರು ದೂರ ಇಟ್ಟಿದ್ದರು. ಜೂನ್ 21ರಂದು ಬೆಳಗಿನ ಜಾವ ದಂಪತಿ ಬೈಕ್ ನಲ್ಲಿ ಹೋಗುವ ವೇಳೆ ದಿವಾಕರ್ ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಪತ್ನಿಯನ್ನು ಕೆಳಗೆ ಬೀಳಿಸಿ ಐದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲ್ಕು ಬಾಟಲಿ ರಕ್ತದ ವ್ಯವಸ್ಥೆ ಮಾಡಿದ್ದು, ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳೇ ನಿಖಿತಾರನ್ನು ಆರೈಕೆ ಮಾಡಿ ಪ್ರಾಣ ಉಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ದಿವಾಕರ್ ಪತ್ನಿಗೆ ಇರಿದಿದ್ದಾನೆ ಎಂದು ಹೇಳಲಾಗಿದ್ದು, ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.