ಬೆಂಗಳೂರು: ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷರೇ ಹೇಳಿರುವುದರಿಂದ ಪಕ್ಷಕ್ಕೆ ಧಕ್ಕೆ ಬರುವುದಾದರೆ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ರಾಜಣ್ಣ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯವೆಂದು ಹೇಳಿದ್ದೆ. ಯಾರೋ ಹೇಳಿದರು ಎಂದು ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ನ 136 ಶಾಸಕರು ಗೆದ್ದಿದ್ದೇವೆ ಎಂದು ಬೀಗುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಉದಾಸೀನ ಭಾವನೆ ಬರಬಾರದು. ಹೀಗಾಗಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಮಾತನಾಡಿದ್ದೇನೆ. ಇದನ್ನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ. ಮುಜುಗರ, ಗೊಂದಲ ಆಗದಂತೆ ಅಧ್ಯಕ್ಷರು, ವರಿಷ್ಠರು ಹೇಳಿದ್ದಾರೆ. ಇದನ್ನು ಬಿಟ್ಟು ಏನು ಮಾತನಾಡೋಕೆ ಯಾರೂ ಹೋಗಲ್ಲ. ಪಕ್ಷದ ಹಿತ ದೃಷ್ಟಿಯಿಂದ ಸಲಹೆ ಸ್ವೀಕರಿಸುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.