ಬೆಂಗಳೂರು: ರಾಜ್ಯ ಸರ್ಕಾರ 2017 ಮತ್ತು 2018 ರಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾ ಪ್ರಯೋಜನ 31 ಸಾವಿರ ರೈತರಿಗೆ ಇನ್ನೂ ದೊರೆತಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಎಸ್. ರವಿ, ಬಿಜೆಪಿಯ ಸುನಿಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂತ್ರಿಕ ಕಾರಣಗಳಿಂದ 31,000 ರೈತರಿಗೆ ಸಾಲ ಮನ್ನಾ ಸೌಲಭ್ಯ ದೊರೆತಿಲ್ಲ. ಅವರಿಗೆ ನೀಡಬೇಕಿರುವ ಮೊತ್ತ 167.51 ಕೋಟಿ ರೂಪಾಯಿ, ಅರ್ಹತೆ ಗುರುತಿಸಲು ಬಾಕಿ ಇರುವ ರೈತರ ಬಾಬ್ತು 64.69 ಕೋಟಿ ರೂಪಾಯಿ ಸೇರಿ ಒಟ್ಟು 232 ಕೋಟಿ ರೂ. ಅನುದಾನ ಬಿಡುಗಡೆಗೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಲ್ಲರಿಗೂ ಪ್ರಯೋಜನ ಸಿಗಲಿದೆ ಎಂದು ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗಿದ್ದ 50,000 ರೂ. ಸಾಲ ಮನ್ನಾ ಪ್ರಯೋಜನವನ್ನು 27.57 ಲಕ್ಷ ರೈತರು, 2018ರಲ್ಲಿ ಘೋಷಿಸಿದ್ದ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ,ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ಪ್ರಸಕ್ತ ಸಾಲಿನಲ್ಲಿ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 25,000 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲದ ಜೊತೆಗೆ ಹೈನುಗಾರಿಕೆಗೆ ದುಡಿಯುವ ಬಂಡವಾಳ ಸಾಲ, 90 ಸಾವಿರ ರೈತರಿಗೆ 2 ಸಾವಿರ ಕೋಟಿ ರೂ. ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸಲಾಗುವುದು ಎಂದು ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವ ರಾಜಣ್ಣ ಉತ್ತರ ನೀಡಿದ್ದಾರೆ.