ಶಿವಮೊಗ್ಗ: ಸಹಕಾರ ಕ್ಷೇತ್ರ ಜನರ ಆಂದೋಲನವಾಗಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ಸಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಅವರು ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳ, ಅಪೆಕ್ಸ್ ಬ್ಯಾಂಕ್, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸಹಕಾರ ಬ್ಯಾಂಕ್ ಮತ್ತು ಇತರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಪ್ರಧಾನಿ ಮೋದಿ ಅವರ ಕನಸನ್ನು ನನಸು ಮಾಡುವತ್ತ ಸಾಗಿದೆ. ಈ ಬಾರಿಯ ಸಪ್ತಾಹದ ಮುಖ್ಯ ಉದ್ದೇಶವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯೇ ಆಗಿದೆ. ಈ ಮೂಲಕ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಸಹಕಾರ ಕ್ರಾಂತಿ ಆಗಲಿದೆ ಎಂದರು.
ಸಹಕಾರ ಕ್ಷೇತ್ರ ಜನರ ಆಂದೋಲನವಾಗಬೇಕು. ಮುಖ್ಯವಾಗಿ ಯುವಕರು ಸಹಕಾರ ಕ್ಷೇತ್ರದಲ್ಲಿ ಭಾಗಿಯಾಗಬೇಕು. ಧ್ವನಿ ಇಲ್ಲದವರ ನೋವಿಗೆ ಸಹಕಾರ ಕ್ಷೇತ್ರ ಸ್ಪಂದಿಸಬೇಕು. ಈ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಿಗೆ ಶೇರು ಹಣವನ್ನು ಸರ್ಕಾರವೇ ತುಂಬುತ್ತದೆ ಎಂದರು.
ಸಹಕಾರಿಗಳಲ್ಲಿ ಸಮಾಜಮುಖಿ ಭಾವನೆ ಇರಬೇಕು. ಆರ್ಥಿಕ ಚಟುವಟಿಕೆ ಹೆಚ್ಚಾಗಬೇಕು. ಕೃಷಿಗೆ ಸಂಬಂಧಿಸಿದಂತೆ ಹೈನುಗಾರಿಕೆಯಂತಹ ಉಪ ಕಸುಬುಗಳು ಅಭಿವೃದ್ಧಿಗೆ ಪ್ರೇರಕವಾಗುತ್ತವೆ. ಈ ನಿಟ್ಟಿನಲ್ಲಿ ಕೃಷಿಕರು ಸಹಕಾರ ಕ್ಷೇತ್ರಕ್ಕೆ ಬರಬೇಕು ಎಂದರು.
ಸಹಕಾರ ಸಂಸ್ಥೆಗಳಿಂದ ಪಡೆದ ಸಾಲ ಅದು ಸರ್ಕಾರದ ಹಣವಲ್ಲ, ಸಾಲವನ್ನು ಮರು ಪಾವತಿ ಮಾಡಲು ಉದಾಸೀನ ಮಾಡಬಾರದು. ಅದು ಠೇವಣಿ ಹಣ. ಮುಜರಾಯಿ ದೇವಸ್ಥಾನಗಳು ಮತ್ತು ಎಪಿಎಂಸಿಯಂತಹ ಸಂಸ್ಥೆಗಳು ತಮ್ಮಲ್ಲಿ ಸಂಗ್ರಹವಾದ ಹಣವನ್ನು ಡಿಸಿಸಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಮೂಲಕ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಹಕಾರ ಕ್ಷೇತ್ರ ಸರ್ಕಾರ ಮಾಡದ ಕೆಲಸಗಳನ್ನು ಮಾಡುತ್ತದೆ. ಸಹಕಾರ ಕ್ಷೇತ್ರ ಎಂದರೆ ರೈತರಿಗೆ ಜೀವಕೋಶ ಇದ್ದಂತೆ. ಇದನ್ನು ಮತ್ತಷ್ಟು ಬಲಪಡಿಸಬೇಕು. ಸಹಕಾರ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಬಗೆಹರಿಸೋಣ. ಆದರೆ, ರೈತರು ಸಹಕಾರ ಕ್ಷೇತ್ರವನ್ನೇ ನಂಬಿಕೊಂಡಿದ್ದಾರೆ. ರೈತರನ್ನು ಮೇಲೆತ್ತುವ ಕೆಲಸ ಸಹಕಾರ ಸಂಸ್ಥೆಗಳಿಂದ ಆಗಬೇಕು ಎಂದರು.
ಸರ್ಕಾರ ಶಾಶ್ವತ ಅಲ್ಲ, ಸಹಕಾರ ಕ್ಷೇತ್ರ ಶಾಶ್ವತ. ಯಾವುದೇ ಸರ್ಕಾರ ಬಂದರೂ ಸಹಕಾರ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕು. ಕೃಷಿ ಸಂಬಂಧಿತ ಸಣ್ಣ ಸಣ್ಣ ಕೈಗಾರಿಕೆಗಳಿಗೆ ನೆರವು ನೀಡಬೇಕು ಎಂದರು.
ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಇದೊಂದು ಸಹಕಾರಿ ಹಬ್ಬವಾಗಿದೆ. ದೀಪಾವಳಿ ಕೂಡ ಜೊತೆಗೆ ಬಂದಿರುವುದರಿಂದ ಸಹಕಾರ ದೀಪಾವಳಿಯನ್ನಾಗಿ ನಾವು ಆಚರಿಸೋಣ. ಸಹಕಾರಿ ಸಂಸ್ಥೆಗಳು ಸ್ವಾಯತ್ತತೆ ಕಾಪಾಡಿಕೊಳ್ಳಲು ದಕ್ಷತೆ ಬೇಕಾಗುತ್ತದೆ. ನಾವು ಸಹಕಾರಿ ಎಂದು ಹೇಳಿಕೊಳ್ಳುವ ಧೈರ್ಯ ನಮಗೆ ಬರಬೇಕು. ಹೆಮ್ಮೆಯ ಭಾರತಕ್ಕೆ ಸಹಕಾರ ಕ್ಷೇತ್ರವೇ ಹೆಬ್ಬಾಗಿಲಾಗಿದೆ ಎಂದರು.
ಗಾಂಧೀಜಿಯವರು ಕೂಡ ಸಹಕಾರ ಕ್ಷೇತ್ರದಿಂದ ರಾಮರಾಜ್ಯ ಎನ್ನುತ್ತಿದ್ದರು. ನಾನು ನಿನಗಾಗಿ, ನೀವು ಎಲ್ಲರಿಗಾಗಿ ಎಂಬ ತತ್ವದ ಅಡಿಯಲ್ಲಿ ಸಹಕಾರ ಕ್ಷೇತ್ರ ಇರಬೇಕು. ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ದಾರಿ ದೀಪವಾಗಿರುವ ಸಹಕಾರ ಸಂಘಗಳು ತಲೆ ಎತ್ತಿ ನಿಲ್ಲುವಂತಾಗಬೇಕು ಎಂದರು.
ಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿ, ಸಹಕಾರ ಕ್ಷೇತ್ರ ಒಂದು ಆಪತ್ಬಾಂಧವ ಆಗಿದೆ. ಖಾಸಗಿ ಬಂಡವಾಳಗಾರರ ಹಿಡಿತದಿಂದ ರೈತರನ್ನು ಕಾಪಾಡಲು ಇದು ಸಹಕಾರಿಯಾಗುತ್ತದೆ. ಆದರೆ, ಸಹಕಾರಿಗಳು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಪ್ರಾಸ್ತವಿಕವಾಗಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಅನೇಕ ಕುಂದುಕೊರತೆಗಳಿವೆ. ಇವುಗಳ ನಡುವೆಯೂ ಅನೇಕ ಸಾಧನೆ ಮಾಡಿದ್ದೇವೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಕೆಲಸ ಮಾಡಿದ್ದೇವೆ. ಆದರೆ, ಇದುವರೆಗೂ ಡಿಸಿಸಿ ಬ್ಯಾಂಕ್ ಗೆ ಬರಬೇಕಿದ್ದ ನಬಾರ್ಡ್ ಹಣ ಇನ್ನೂ ಬಂದಿಲ್ಲ ಎಂದರು.
ಸಾಂಖ್ಯಿಕ ಸಚಿವ ಡಿ. ಸುಧಾಕರ್ ಸಹಕಾರ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರತ್ನಾಕರ್, ನಿರ್ದೇಶಕ ಗಂಗಣ್ಣ, ಆರ್. ರಾಮರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡರಾದ ಎಂ.ಶ್ರೀಕಾಂತ್, ಎಸ್.ಕೆ. ಮರಿಯಪ್ಪ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸಹಕಾರ ಸಂಘಗಳ ನಿಬಂಧಕ ಡಾ.ಕೆ. ರಾಜೇಂದ್ರ, ಸಹಕಾರ ಸಂಘಗಳ ನೋಡಲ್ ಅಧಿಕಾರಿ ಆಶಾ, ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ನವೀನ್, ಸತೀಶ್, ಸಿ.ಎನ್. ದೇವರಾಜ್, ಅಶ್ವತ್ಥನಾರಾಯಣ, ಎಸ್.ಜಿ. ಶೇಖರ್, ಜಿ. ವಾಸುದೇವ್ ಮೊದಲಾದವರಿದ್ದರು. ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಮತ್ತು ಕುವೆಂಪು ರಂಗಮಂದಿರ ಆವರಣದಲ್ಲಿ ಸ್ವಸಹಾಯ ಸಂಘಗಳ ಮಳಿಗೆಗಳನ್ನು ತೆರೆಯಲಾಗಿತ್ತು.