ತುಮಕೂರು: ನಾವೇನು ಹೈಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ರಾಜಣ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯವಾಗಿ ಯಾವ ಮುಖಂಡರು, ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ಇಲ್ಲಿನವರಿಗೆ ಗೊತ್ತಿರುತ್ತದೆ. ನಾವು ಕೊಟ್ಟ ಹೆಸರುಗಳನ್ನು ಸೇರಿಸದೇ ದೆಹಲಿಯಲ್ಲಿ ಕುಳಿತು ಬೇಕಾದವರ ಹೆಸರುಗಳನ್ನು ಸೇರಿಸಲಾಗಿದೆ. ಲಾಟರಿ ಟಿಕೆಟ್ ಹಂಚಿದಂತೆ ನಿಗಮ ಮಂಡಳಿಗಳಿಗೆ ದೆಹಲಿಯಲ್ಲಿ ಕುಳಿತುಕೊಂಡು ನೇಮಕಾತಿ ನಡೆಸಲಾಗುತ್ತಿದೆ. ನಮ್ಮನ್ನು ವಿಶ್ವಾಸಕ್ಕೆ ಪಡೆದು ನಿಗಮ ಮಂಡಳಿಗಳಿಗೆ ನೇಮಕ ಮಾಡಬಹುದಿತ್ತು. ಈ ಹಿಂದೆ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ನೀಡಿ ಸಲಹೆ ಕೊಡುತ್ತಿದ್ದರು. ಈಗ ಅವರೇ ಪಟ್ಟಿ ಸಿದ್ಧಪಡಿಸಿ ಕಳುಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿಯೂ ಇದೇ ರೀತಿ ಆದರೆ ಅವರೇ ಇಲ್ಲಿಗೆ ಬಂದು ಗೆಲ್ಲಿಸಬೇಕಾಗುತ್ತದೆ. ಎಲ್ಲವನ್ನು ಅವರೇ ಮಾಡುವುದಾದರೆ ನಮ್ಮನ್ನು ಕೇಳುವಂತಿಲ್ಲ ಎನ್ನುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಎಂದು ಹೇಳಿದ್ದಾರೆ.
ಮುದ್ದಹನುಮೇಗೌಡ ತುಮಕೂರು ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯ ಅಭ್ಯರ್ಥಿ ಗೆಲ್ಲಿಸದ ಸಚಿವರ ತಲೆದಂಡ ಮಾಡುವುದಾದರೆ ಮಾಡಲಿ. ನನ್ನದೂ ತಲೆದಂಡವಾಗಲಿ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.