ಬೆಂಗಳೂರು: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಕೆಎಂಎಫ್ ನಂದಿನಿ ತುಪ್ಪ ಪೂರೈಕೆ ಪುನರಾರಂಭವಾಗಿದೆ.
ಒಂದು ವರ್ಷದಿಂದ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. ಇದೀಗ ಮತ್ತೆ ಕೆಎಂಎಫ್ ಗೆ ಟೆಂಡರ್ ದೊರೆತಿದ್ದು, ಮೊದಲ ತುಪ್ಪದ ಟ್ಯಾಂಕರ್ ಬುಧವಾರ ತಿರುಮಲಕ್ಕೆ ತೆರಳಿದೆ. ಕಳೆದ ಒಂದು ವರ್ಷದಿಂದ ಲಡ್ಡು ಪ್ರಸಾದದಲ್ಲಿ ಇಲ್ಲವಾಗಿದ್ದ ನಂದಿನಿ ತುಪ್ಪದ ಸ್ವಾದ ಮತ್ತೆ ಲಭ್ಯವಾಗಲಿದೆ.
ನಷ್ಟದ ನೆಪದಲ್ಲಿ ಕಳೆದ ವರ್ಷ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಕೆಎಂಎಫ್ ಸ್ಥಗಿತ ಮಾಡಿದ್ದು 2013-14ನೇ ಸಾಲಿನಿಂದ ನಿರಂತರವಾಗಿ ಐದು ಸಾವಿರ ಮೆ.ಟನ್ ತುಪ್ಪವನ್ನು ತಿರುಪತಿ ಲಡ್ಡು ಪ್ರಸಾದ ತಯಾರಿಕೆ ಗೆ ಪೂರೈಕೆ ಮಾಡಲಾಗಿತ್ತು. ಕಳೆದ ವರ್ಷ ಕಡಿಮೆ ಮೊತ್ತಕ್ಕೆ ತುಪ್ಪ ಮಾರಾಟ ಮಾಡಲು ಒಪ್ಪದೇ ಕೆಎಂಎಫ್ ಟೆಂಡರ್ ನಿಂದ ಹಿಂದೆ ಸರಿದಿತ್ತು. ಇದೀಗ ಮತ್ತೆ ಟೆಂಡರ್ ದೊರೆತಿದ್ದು, 2024- 25 ನೇ ಸಾಲಿನಲ್ಲಿ ಆರಂಭಿಕವಾಗಿ 350 ಮೆ.ಟನ್ ನಂದಿನಿ ತುಪ್ಪ ಸರಬರಾಜು ಮಾಡಲಾಗುವುದು.