
ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಹೈನುಗಾರರ ನೆರವಿಗೆ ನಮ್ಮ ಸರ್ಕಾರವು ಧಾವಿಸಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕೆಎಂಎಫ್’ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ. ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತೇಜನ ಸಿಗುತ್ತಿದ್ದು, ಇದೀಗ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಹಾಲಿನ ದರವು ನೇರವಾಗಿ ಹೈನುಗಾರರ ಕೈಸೇರುತ್ತಿರುವುದು ಪ್ರೋತ್ಸಾಹಕರವಾಗಿದೆ ಎಂದು ಹೇಳಿದ್ದಾರೆ.