ಬೆಂಗಳೂರು: ನಂದಿನಿ ಬ್ರ್ಯಾಂಡ್ ನ ಹಾಲು, ಮೊಸರು ದರ ಹೆಚ್ಚಳ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಖ್ಯಮಂತ್ರಿಗಳ ಮುಂದೆ ಮಂಡಿಸಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾಪವಿಲ್ಲ. ನಂದಿನಿ ಬ್ರಾಂಡ್ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಎಮ್ಮೆ ಹಾಲಿಗೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ಕೋರಿಕೆಯಂತೆ ಆಗಸ್ಟ್ ನಲ್ಲಿ ಹಾಲಿನ ದರ 3 ರೂ. ಹೆಚ್ಚಳ ಮಾಡಲಾಗಿತ್ತು. ರೈತರ ಸಮಸ್ಯೆ ಅರಿತು ಮುಖ್ಯಮಂತ್ರಿಗಳ ಸೂಚನೆಯಂತೆ ಹೆಚ್ಚಳ ಮಾಡಿದ ಮೂರು ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಹಾಲು ಮೊಸರು ದರ ಹೆಚ್ಚಳ ಅನಿವಾರ್ಯವಾದಲ್ಲಿ ಒಕ್ಕೂಟಗಳ ಅಭಿಪ್ರಾಯ ಪಡೆದುಕೊಂಡು ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.