ಬೆಂಗಳೂರು: ಕೆಎಂಎಫ್ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಇಡ್ಲಿ ದೋಸೆ ಸಿದ್ದ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. 10 ದಿನದೊಳಗೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಲಿದೆ.
ಮೊದಲ ಹಂತದಲ್ಲಿ ಪ್ರತಿದಿನ 10 ರಿಂದ 20 ಸಾವಿರ ಕೆಜಿ ಹಿಟ್ಟನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿಯೇ ಜಯನಗರದಲ್ಲಿ ಪ್ಯಾಕಿಂಗ್ ಘಟಕ ತೆರೆಯಲಾಗಿದೆ. ಸಿದ್ದ ಹಿಟ್ಟು ಮಾರಾಟಕ್ಕೆ ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರವೇ ಮಾರುಕಟ್ಟೆಗೆ ಪ್ರವೇಶಿಸಲಿದೆ.
ಮಾರುಕಟ್ಟೆಯಲ್ಲಿರುವ ಇಡ್ಲಿ ಮತ್ತು ದೋಸೆಯ ಸಿದ್ಧ ಹಿಟ್ಟಿನ ದರಕ್ಕಿಂತ ಕಡಿಮೆ ದರದಲ್ಲಿ ನಂದಿನಿ ಬ್ರ್ಯಾಂಡ್ ನ ಇಡ್ಲಿ ಮತ್ತು ದೋಸೆ ಹಿಟ್ಟು ಗ್ರಾಹಕರಿಗೆ ಲಭ್ಯವಾಗಲಿದೆ. ಬೆಂಗಳೂರು ನಂತರ ಎರಡನೇ ಹಂತದಲ್ಲಿ ರಾಜ್ಯಾದ್ಯಂತ ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟ ವಿಸ್ತರಿಸಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದ್ದಾರೆ.
450 ಗ್ರಾಂ ಮತ್ತು 900 ಗ್ರಾಂ ಪ್ಯಾಕೆಟ್ ಗಳಲ್ಲಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಬರಲಿದ್ದು, ಶೀಘ್ರವೇ ದರ ನಿಗದಿಪಡಿಸಲಾಗುವುದು. ಮುಖ್ಯಮಂತ್ರಿಯವರು ಸಮಯ ನೀಡಿದ ನಂತರ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗುವುದು ಎನ್ನಲಾಗಿದೆ.