ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ರಾಜ್ಯಾದ್ಯಂತ 17 ಖರೀದಿ ಕೇಂದ್ರಗಳನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ತೆರೆದಿದ್ದು, ಇವುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಖರೀದಿ ಕೇಂದ್ರಗಳಿಗೆ ನೇಮಕ ಮಾಡಿದ ಅಧಿಕಾರಿಗಳು ಎಪಿಎಂಸಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.. ನವೆಂಬರ್ 14ರಿಂದ ನಿಯಮಾನುಸಾರ ಖರೀದಿ ಪ್ರಕ್ರಿಯೆ ಆರಂಭಿಸಿ ಗೋದಾಮಗಳಲ್ಲಿ ಸಂಗ್ರಹವಾಗುವ ಮೆಕ್ಕೆಜೋಳವನ್ನು ಘಟಕಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ಹೇಳಲಾಗಿದೆ.
ರೈತರಿಂದ ಖರೀದಿಸಿದ 20 ದಿನದೊಳಗೆ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಆಯಾ ದಿನದ ಖರೀದಿ ಪ್ರಮಾಣದ ವರದಿಯನ್ನು ಅಂದೇ ಸಲ್ಲಿಸುವಂತೆ ತಿಳಿಸಲಾಗಿದೆ.
ಮಹಾಮಂಡಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಐದು ಪಶು ಆಹಾರ ಘಟಕಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಾಗುತ್ತದೆ. ಈಗಾಗಲೇ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಗೆ 22 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಿದ್ದು, ಕರ್ನಾಟಕ ಹಾಲು ಮಹಾಮಂಡಳ ಸಾಗಾಣಿಕೆ ಮತ್ತು ಗೋಣಿಚೀಲದ ವೆಚ್ಚ 175 ರೂ. ಸೇರಿಸಿ ಪ್ರತಿ ಕ್ವಿಂಟಾಲ್ ಗೆ 2400 ರೂ.ನಂತೆ ಖರೀದಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.