ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಬರೋಬ್ಬರಿ 400 ಮೆಟ್ರಿಕ್ ಟನ್ ಗಳಷ್ಟು (4 ಲಕ್ಷ ಕೆಜಿ) ಸಿಹಿ ತಿಂಡಿ ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ದಸರಾ ಹಬ್ಬದ ಹಿಂದುಮುಂದಿನ 15 ದಿನಗಳಲ್ಲಿ ಈ ಮಟ್ಟಿಗಿನ ಸಿಹಿ ತಿಂಡಿ ಮಾರಾಟವಾಗಿದ್ದು, ಸಾಮಾನ್ಯವಾಗಿ ಕೆಎಂಎಫ್ ಪ್ರತಿ ವರ್ಷ 180 ಮೆಟ್ರಿಕ್ ಟನ್ ನಿಂದ 200 ಮೆಟ್ರಿಕ್ ಟನ್ ವರೆಗೆ ಸಿಹಿ ತಿಂಡಿ ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ. ಆದರೆ ಈ ಬಾರಿ ಅದು ದುಪ್ಪಟ್ಟಾಗಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ, ‘ನಂದಿನಿ’ ಬ್ರಾಂಡ್ ಅಡಿಯಲ್ಲಿ ಮೈಸೂರು ಪಾಕ್, ಚಾಕೊಲೇಟ್ ಬರ್ಫಿ, ಧಾರವಾಡ ಪೇಡಾ, ಬೇಸನ್ ಲಾಡು, ಜಾಮೂನ್, ಕುಂದಾ, ತೆಂಗಿನಕಾಯಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಸೇರಿದಂತೆ ಹಲವು ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಹಬ್ಬಗಳ ಸಂದರ್ಭದಲ್ಲಿ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ. ಈ ಬಾರಿಯ ದೀಪಾವಳಿ ವೇಳೆ ಕೂಡ ಸಿಹಿ ತಿಂಡಿಗಳು ಅತಿ ಹೆಚ್ಚು ಮಾರಾಟವಾಗುವ ನಿರೀಕ್ಷೆ ಇದೆ.