ಶಿವಮೊಗ್ಗ: ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಬೇಕೆಂಬ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಪತ್ರ ಬರೆದು ಮನವಿ ಮಾಡಿದ್ದಾರೆ.
ಅಡಿಕೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದ್ದು, ಪ್ರಸ್ತುತ ಅಡಿಕೆ ಬೆಳೆಯ ಕೊಯ್ಲು ಪ್ರಕ್ರಿಯೆ ನಡೆದಿದೆ. ಮಧ್ಯಮ ಸಣ್ಣ ಮತ್ತು ಅತಿ ಸಣ್ಣ ರೈತರು ಇತ್ತೀಚಿನ ವರ್ಷಗಳಲ್ಲಿ ಎರಡು ಬೆಲ್ಟ್ ನ ಅಡಿಕೆ ಸುಲಿಯುವ ಯಂತ್ರವನ್ನು ಗೃಹ ಬಳಕೆ ವಿದ್ಯುತ್ ನಲ್ಲಿ ಬಳಸುತ್ತಿದ್ದಾರೆ. ಆದರೆ, ಇಂಧನ ಇಲಾಖೆಯಿಂದ ಹೊಸ ಆದೇಶ ಹೊರಡಿಸಿ ರೈತರು ಬಳಸುವ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಲು ಸೂಚಿಸಲಾಗಿದೆ.
ಯಂತ್ರ ವರ್ಷದಲ್ಲಿ ಎರಡು ತಿಂಗಳು ಅಥವಾ ಮೂರು ತಿಂಗಳು ಆಗಾಗ ಮಾತ್ರ ಬಳಕೆಯಾಗುತ್ತದೆ. ಉಳಿದ ಸಮಯದಲ್ಲಿ ಯಂತ್ರದ ಬಳಕೆ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಪ್ರತ್ಯೇಕ ಮೀಟರ್ ಅಳವಡಿಕೆ ಆದೇಶ ಮರುಪರಿಶೀಲಿಸಬೇಕೆಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.