ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಹೊಸ ಮನೆಗಳಿಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ಮನೆ ನಿರ್ಮಿಸಿದವರಿಗೆ ಹಾಗೂ ಹೊಸದಾಗಿ ಮನೆ ಬಾಡಿಗೆಗೆ ಬರುವವರಿಗೂ ಉಚಿತ ವಿದ್ಯುತ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಮನೆ ನಿರ್ಮಿಸಿದವರು ಮತ್ತು ಹೊಸ ಬಾಡಿಗೆದಾರರಿಗೆ ಗೃಹಜ್ಯೋತಿ ಯೋಜನೆಯಡಿ ಸರಾಸರಿ ವಿದ್ಯುತ್ ಬಳಕೆ ನಿಗದಿಪಡಿಸುವ ಕುರಿತಾಗಿ ಚರ್ಚೆ ನಡೆಸಲಾಗಿದೆ. ಅವರಿಗೆ ಸರಾಸರಿ 53 ಯೂನಿಟ್ ಜತೆಗೆ ಹೆಚ್ಚುವರಿಯಾಗಿ ಶೇಕಡ 10 ರಷ್ಟು ಯೂನಿಟ್ ಬಳಕೆಯ ಮಿತಿ ವಿಧಿಸಲು ನಿರ್ಧರಿಸಲಾಗಿದೆ. 58 ರಿಂದ 59 ಯೂನಿಟ್ ಉಚಿತ ವಿದ್ಯುತ್ ಸಿಗಲಿದ್ದು, ಹೆಚ್ಚುವರಿ ಬಳಕೆಯ ಯೂನಿಟ್ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.