ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ವಿದ್ಯುತ್ ಬೇಡಿಕೆ ಕೂಡ ಹೆಚ್ಚಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಬಹುದು ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಪರಿಸ್ಥಿತಿ ಇಲ್ಲ. ಆದರೆ, ಬೇಸಿಗೆಯಲ್ಲಿ ಇರುವಷ್ಟು ವಿದ್ಯುತ್ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಳೆಯೂ ಬಾರದೆ ವಿದ್ಯುತ್ ಕೊರತೆ ಹೀಗೆ ಮುಂದುವರೆದರೆ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡಬೇಕಾಗುತ್ತದೆ. ಆದರೆ, ಅಂತಹ ಪರಿಸ್ಥಿತಿ ಇಲ್ಲ. ಅಂತಹ ಪರಿಸ್ಥಿತಿ ಬರದಂತೆ ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.
ವಿದ್ಯುತ್ ಉತ್ಪಾದನೆಯಲ್ಲಿ 17 ದಶಲಕ್ಷ ಯೂನಿಟ್ ಕಡಿಮೆಯಾಗಿದ್ದರಿಂದ ಸಮತೋಲನ ಕಾಯ್ದುಕೊಳ್ಳಲು ತಾತ್ಕಾಲಿಕವಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು. ಕೆಲವು ಸಲ ನಿರ್ವಹಣೆ ಮತ್ತು ಟಿಸಿ ದುರಸ್ತಿಯಿಂದ ವಿದ್ಯುತ್ ಕಡಿತವಾಗಿರುತ್ತದೆ. ಅದನ್ನು ಲೋಡ್ ಶೆಡ್ಡಿಂಗ್ ಎಂದು ಜನ ತಿಳಿದುಕೊಂಡಿದ್ದಾರೆ ಎಂದರು.