ಮುಂಬೈ: ತುಟಿಗೆ ಮುತ್ತು ಕೊಡುವುದು ಮತ್ತು ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು ಅಸ್ವಾಭಾವಿಕ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಈ ರೀತಿ ಮಾಡುವುದು ಭಾರತೀಯ ದಂಡ ಸಂಹಿತೆ 377 ನೇ ಸೆಕ್ಷನ್ ಅಡಿ ಅಪರಾಧ ಎನಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಕಳೆದ ವರ್ಷ ವಿಡಿಯೋ ಗೇಮ್ ರೀಚಾರ್ಜ್ ಮಾಡಿಸಿಕೊಳ್ಳಲು ಹೋಗಿದ್ದ 14 ವರ್ಷದ ಬಾಲಕನ ತುಟಿಗೆ ಮುತ್ತು ಕೊಟ್ಟು ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಐಪಿಸಿ 377 ನೇ ಸೆಕ್ಷನ್ ಹಾಗೂ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಅಂಗಡಿ ಮಾಲಿಕನನ್ನು ಬಂಧಿಸಿದ್ದರು.
ಐಪಿಸಿ 377 ಸೆಕ್ಷನ್ ಅಡಿ ಆರೋಪ ಸಾಬೀತಾದಲ್ಲಿ ಅಜೀವ ಜೈಲು ಶಿಕ್ಷೆ, ಪೋಕ್ಸೋ ಕಾಯ್ದೆಯಡಿ ಆರೋಪ ಸಾಬೀತಾದಲ್ಲಿ ಐದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಈ ಕುರಿತಾದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನುಜಾ ಪ್ರಭುದೇಸಾಯಿ ಅವರು, ಅಂಗಡಿ ಮಾಲೀಕನ ಮೇಲೆ ಹೊರಿಸಿದ ಆರೋಪಗಳು ಐಪಿಸಿ 377ನೇ ಸೆಕ್ಷನ್ ಅಡಿ ಅನೈಸರ್ಗಿಕ ಅಪರಾಧ ಆಗುವುದಿಲ್ಲ. ಆತನಿಗೆ ಜಾಮೀನು ನೀಡಲು ಅವಕಾಶವಿದೆ. ಅಲ್ಲದೇ, ಒಂದು ವರ್ಷದಿಂದ ಜೈಲಿನಲ್ಲಿದ್ದು, ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗುವ ಲಕ್ಷಣಗಳಿಲ್ಲದ ಕಾರಣ ಜಾಮೀನು ನೀಡಬಹುದು ಎಂದು ಹೇಳಿ ಜಾಮೀನು ಮಂಜೂರು ಮಾಡಿದ್ದಾರೆ.