
ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದ ಅನರ್ಹ ಫಲಾನುಭವಿಗಳಿಗೆ ಬಿಸಿ ಮುಟ್ಟಿಸಲಾಗಿದೆ. 42 ಲಕ್ಷ ಅನರ್ಹ ರೈತರಿಗೆ ವರ್ಗಾವಣೆಯಾಗಿದ್ದ ಸುಮಾರು 3000 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.
ಸಂಸತ್ ಗೆ ಈ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಪ್ರಶ್ನೆಯೊಂದಕ್ಕೆ ನೀಡಲಾದ ಲಿಖಿತ ಉತ್ತರದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ಮೂರು ಕಂತುಗಳಲ್ಲಿ ರೈತರಿಗೆ 6000 ರೂ. ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಎಂದು ನಿಯಮವಿದ್ದು, ತೆರಿಗೆದಾರರಾದ 42.16 ಲಕ್ಷ ರೈತರು ಹಣ ಪಡೆದುಕೊಂಡಿದ್ದಾರೆ. ಇಂತಹ ರೈತರಿಂದ 2992 ಕೋಟಿ ರೂಪಾಯಿ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಅನರ್ಹರ ಪಟ್ಟಿಯಲ್ಲಿ ಅತಿ ಹೆಚ್ಚಿನವರು ಅಸ್ಸಾಂನಲ್ಲಿದ್ದು, 8.35 ಲಕ್ಷ ಮಂದಿ ಅನರ್ಹ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತೆರಿಗೆದಾರರು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಿಲ್ಲ. ಆಧಾರ್ ಮತ್ತು ಆದಾಯ ತೆರಿಗೆ ಮಾಹಿತಿಯನ್ನು ಆಧರಿಸಿ ಅನರ್ಹ ರೈತರನ್ನು ಗುರುತಿಸಿ ಅಂತಹ ರೈತರಿಂದ ಹಣ ವಸೂಲಿ ಮಾಡಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದಾಖಲೆಗಳ ಪರಿಶೀಲಿಸಿ ಹಣ ವಸೂಲಿ ಮಾಡಲು ಸರ್ಕಾರಗಳಿಗೆ ಸೂಚನೆ ನೀಡಿರುವುದಾಗಿ ನರೇಂದ್ರ ಸಿಂಗ್ ತೋಮರ್ ಮಾಹಿತಿ ನೀಡಿದ್ದಾರೆ.