ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಶಾಸಕಿ ಕಿರಣ್ ಚೌಧರಿ ಮತ್ತು ಅವರ ಪುತ್ರಿ, ಮಾಜಿ ಸಂಸದೆ ಶ್ರುತಿ ಚೌಧರಿ ಬಿಜೆಪಿ ಸೇರಲಿದ್ದಾರೆ. ಇಬ್ಬರೂ ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ.
ಕಿರಣ್ ಚೌಧರಿ ಹರಿಯಾಣದ ತೋಷಮ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅವರು ತಮ್ಮ ಮಗಳಿಗೆ ಭಿವಾನಿ ಮಹೇಂದ್ರಗಢ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ಮಗಳಿಗೆ ಟಿಕೆಟ್ ನೀಡದ ಕಾರಣ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರನ್ನು ಮಹಿಂದರ್‌ಗಢ ಲೋಕಸಭೆಯಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಚುನಾವಣೆಯಲ್ಲಿ ಸೋತರು. ಸೋಲಿಗೆ ಕಿರಣ್ ಚೌಧರಿ ಕಾರಣವೆಂದು ಆರೋಪಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಿರಣ್, ಸರಿಯಾಗಿ ಟಿಕೆಟ್ ಹಂಚಿಕೆ ಮಾಡಿದ್ದರೆ ಇಲ್ಲಿಂದ ಕಾಂಗ್ರೆಸ್ ಗೆಲ್ಲಬಹುದಿತ್ತು ಎಂದಿದ್ದರು.
ಎರಡು ದಿನಗಳ ಹಿಂದೆ ಭಿವಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಕಿರಣ್ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಆಕೆಯ ಮಾವ ಬನ್ಸಿ ಲಾಲ್ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು.
ಕಿರಣ್ ಚೌಧರಿ ಹಾಗೂ ಪುತ್ರಿ ಶ್ರುತಿ ಚೌಧರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮಂತಹ ಪ್ರಾಮಾಣಿಕ ದನಿಗಳಿಗೆ ಜಾಗವಿಲ್ಲದೇ ವೈಯಕ್ತಿಕ ದ್ವೇಷದಂತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷದ ನಾಯಕತ್ವವು ತನ್ನ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ಸಂಚು, ಅವಮಾನ ಮತ್ತು ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ಶ್ರುತಿ ಚೌಧರಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಹರಿಯಾಣ ಕಾಂಗ್ರೆಸ್ ಏಕ ವ್ಯಕ್ತಿ ಕೇಂದ್ರಿತವಾಗಿದೆ ಎಂದು ಟೀಕಿಸಿದ್ದಾರೆ.