ನವದೆಹಲಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಗಿದೆ. ರಾಷ್ಟ್ರಪತಿ ಭವನದಿಂದ ಮಂಗಳವಾರ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಉಪರಾಜ್ಯಪಾಲ ಹುದ್ದೆಯಿಂದ ಕಿರಣ್ ಬೇಡಿ ಅವರನ್ನು ತೆರವುಗೊಳಿಸಲಾಗಿದೆ.
ತೆಲಂಗಾಣದ ರಾಜ್ಯಪಾಲರಾದ ಡಾ. ತಮಿಳ್ ಸಾಯಿ ಅವರಿಗೆ ಹೆಚ್ಚುವರಿಯಾಗಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆ ವಹಿಸಲಾಗಿದೆ. 2016 ರಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಕಿರಣ್ ಬೇಡಿ ನೇಮಕವಾಗಿದ್ದರು. ತಮ್ಮ ಖಡಕ್ ನೀತಿಗಳಿಂದ ಅವರು ಗಮನಸೆಳೆದಿದ್ದರಾದರೂ ಮುಖ್ಯಮಂತ್ರಿ ನಾರಾಯಣಸ್ವಾಮಿ ಜೊತೆಗೆ ಸಂಘರ್ಷ ಹೊಂದಿದ್ದರು.
ಕಿರಣ್ ಬೇಡಿ ಅವರನ್ನು ವಜಾಗೊಳಿಸಬೇಕೆಂದು ನಾರಾಯಣಸ್ವಾಮಿ ಪಟ್ಟುಹಿಡಿದಿದ್ದರು. ಅಂದಹಾಗೇ, ನಾರಾಯಣಸ್ವಾಮಿ ನೇತೃತ್ವದ ಪುದುಚೇರಿಯ ಕಾಂಗ್ರೆಸ್ -ಡಿಎಂಕೆ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.