ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕಿಮ್ಸ್ ಸಿಬ್ಬಂದಿಯ ಯಡವಟ್ಟಿಗೆ ಮಗುವೇ ಬದಲಾದ ಘಟನೆ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆ ಸೆ.3ರಂದು ಕಿಮ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಚಿಕಿತ್ಸೆಗಾಗಿ ಕಳೆದ 15 ದಿನಗಳಿಂದ ಐಸಿಯುನಲ್ಲಿಟ್ಟಿದ್ದಾರೆ. ಜನನ ದಾಖಲೆಯಲ್ಲಿಯೂ ಗಂಡು ಮಗು ಎಂದು ನಮೂದಿಸಿದ್ದರೂ, ಕಿಮ್ಸ್ ಸಿಬ್ಬಂದಿ ಯಡವಟ್ಟಿನಿಂದಾಗಿ ಚಿಕಿತ್ಸೆ ಬಳಿಕ ಗಂಡು ಮಗು ಬದಲಾಗಿ ಹೆಣ್ಣು ಮಗುವನ್ನು ಕುಟುಂಬದ ಕೈಗೆ ನೀಡಿದ್ದಾರೆ.
ಸಿಬ್ಬಂದಿಗಳ ಬೇಜವಾಬ್ದಾರಿ ನಡೆಗೆ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕಿತ್ಸೆಗೆಂದು ಐಸಿಯುಗೆ ದಾಖಲಿಸಿದ ಬಳಿಕ ಮಗುವನ್ನೇ ಬದಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಿವಪ್ಪ ಮುತ್ತವ್ವ ಆಚಾರ್ ದಂಪತಿಗೆ ಗಂಡುಮಗುವಾಗಿದ್ದು, ಮಗುವಿನ ತೂಕ ಕಡಿಮೆಯಿದೆ ಎಂದು ಐಸಿಯುನಟ್ಟು ಚಿಕಿತ್ಸೆ ನೀಡಿದ್ದಾರೆ. ಇನ್ನೊಂದೆಡೆ ತಾಯಿಗೆ ಸಿಜರಿಯನ್ ಆಗಿದ್ದರಿಂದ ಅವರಿಗೂ ಚಿಕಿತ್ಸೆ ಮುಂದುವರೆದಿತ್ತು. 15 ದಿನಗಳ ಬಳಿಕ ಈಗ ಗಂಡು ಮಗುವಿನ ಬದಲಾಗಿ ಹೆಣ್ಣು ಮಗುವನ್ನು ಪೋಷಕರ ಕೈಗೆ ಸಿಬ್ಬಂದಿಗಳು ನೀಡಿದ್ದಾರೆ. ಇದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.
ಈ ಬಗ್ಗೆ ಮಗುವಿನ ತಂದೆ ಶಿವಪ್ಪ ಪ್ರತಿಕ್ರಿಯಿಸಿ ನಾವು ಆಸ್ಪತ್ರೆಗೆ ಬಂದು 18 ದಿನ ಆಗಿದೆ. ಮಗುವಿನ ತೂಕ ಕಡಿಮೆ ಇದೆ ಎಂದು ಐಸಿಯುನಟ್ಟಿದ್ದರು. ಪ್ರತಿದಿನ ಹೋಗಿ ನಾವು ವೈದ್ಯರನ್ನು ಕೇಳಿದರೆ ಅವರು ಮಗು ಆರಾಮವಾಗಿದೆ. ಚಿಕಿತ್ಸೆ ನಡೆದಿದೆ ಎನ್ನುತ್ತಿದ್ದರು. ಇಂದು ಹೋಗಿ ಕೇಳಿದರೆ ನಿಮ್ಮ ಮಗು ಗಂಡು ಮಗುವಲ್ಲ, ಹೆಣ್ಣುಮಗು ಎಂದು ಹೇಳುತ್ತಿದ್ದಾರೆ. ನಮ್ಮ ಮಗು ಗಂಡು ಮಗು. ಜನನ ದಾಖಲೆಯಲ್ಲಿಯೂ ಗಂಡು ಮಗು ಎಂದಿದ್ದು, ಸಹಿ ಕೂಡ ಮಾಡಿದ್ದೇವೆ ಎಂದು ಹೇಳಿದರೆ ಬೀಕಿದ್ದರೆ ಮಗು ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ಸಿಬ್ಬಂದಿಗಳು ವಾದಿಸುತ್ತಿದ್ದಾರೆ. ಡೆಲಿವರಿಯಾದಾಗ ವೈದ್ಯರೇ ನಮಗೆ ಗಂಡು ಮಗುವಾಗಿದೆ ಎಂದು ಹೇಳಿದ್ದರು. ಈಗ ನರ್ಸ್ ಗಳು ಮಗುವನ್ನೇ ಬದಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರ ಪ್ರತಿಭಟನೆ ಹೆಚ್ಚುತ್ತಿದ್ದಂತೆ ಸ್ಥಳಕ್ಕಾಗಮಿಸಿ ಗೊಂದಲ ನಿವಾಸಿದ ಕಿಮ್ಸ್ ಅಧೀಕ್ಷಕ ಅರುಣ್ ಕುಮಾರ್, ತಾಯಿ ಹಾಗೂ ಮಗುವಿನ ಕೈಗೆ ಒಂದೇ ನಂಬರಿನ ಬ್ಯಾಂಡ್ ಕಟ್ಟಿರುತ್ತಾರೆ. ಬ್ಯಾಂಡ್ ಕಳಚಿ ಬಿದ್ದಿದ್ದ ಕಾರಣ ಕೆಲ ಕಾಲ ಗೊಂದಲವುಂಟಾಗಿ ಮಗು ಅದಲು ಬದಲಾಗಿ ಪೋಷಕರಿಗೆ ಬೇರೆ ಮಗು ನೀಡಲಾಗಿತ್ತು. ಈಗ ಪರಿಶೀಲನೆ ಬಳಿಕ ಗೊಂದಲ ನಿವಾರಣೆಯಾಗಿದ್ದು, ಅವರ ಮಗುವನ್ನು ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.