ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥಗೌಡ ಅವರ ನಡುವೆ ಭಾರಿ ಪೈಪೋಟಿ ಕಂಡು ಬಂದಿದ್ದು, ಆಕಾಂಕ್ಷಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಧಾನ ಸಭೆ ನಡೆಸಿ, ಒಗ್ಗಟ್ಟಿನಿಂದ ಕೆಲಸ ಮಾಡಲು ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಕಿಮ್ಮನೆ ರತ್ನಾಕರ್, ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದೇವೆ. ನಮ್ಮ ಅಭಿಪ್ರಾಯವನ್ನು ಪಕ್ಷದ ಅಧ್ಯಕ್ಷರಿಗೆ ತಿಳಿಸಿದ್ದೇವೆ. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ನಾನು ಒಂದಲ್ಲ ಮೂರು ಮೆಟ್ಟಿಲು ಇಳಿಯೋಕೆ ರೆಡಿ. ಒಗ್ಗಟ್ಟಾಗಿ ಕೆಲಸ ಮಾಡಲು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ ಟಿಕೆಟ್ ತಪ್ಪಿದೆ. ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ನಾನು ಎಲ್ಲಾ ಹೇಳೋಕೆ ಜ್ಯೋತಿಷ್ಯ ಕಲಿಯಬೇಕಷ್ಟೇ ಎಂದು ಹೇಳಿದ್ದಾರೆ
ತೀರ್ಥಹಳ್ಳಿ ಆಕಾಂಕ್ಷಿಗಳ ಸಭೆ ಮುಕ್ತಾಯವಾದ ಬಳಿಕ ಮಾತನಾಡಿದ ಆರ್.ಎಂ. ಮಂಜುನಾಥಗೌಡ, ಇಬ್ಬರು ಒಗ್ಗಟ್ಟಾಗಿ ಹೋಗಿ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಭಿನ್ನಾಭಿಪ್ರಾಯ ಮರೆತು ಮುಂದುವರೆಯಲು ತಿಳಿಸಿದ್ದಾರೆ. ಟಿಕೆಟ್ ವಿಚಾರದಲ್ಲಿ ಅಧ್ಯಕ್ಷರ ನಿರ್ಧಾರವೇ ಅಂತಿಮ. ಏಪ್ರಿಲ್ 4ರಂದು ಅಭ್ಯರ್ಥಿ ಘೋಷಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ಸೋಲಿಸುವುದೇ ನಮ್ಮ ಗುರಿಯಾಗಿದೆ. ಈ ಸಲ ನಾವು ಗೆಲ್ಲುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದ್ದಾರೆ.